ಮನೋರಂಜನೆ

ಇಂದು ಬಿಡುಗಡೆಯಾಗಲಿರುವ ಕುರುಕ್ಷೇತ್ರ ಚಿತ್ರದ ಗುಟ್ಟು ರಟ್ಟು..!

Pinterest LinkedIn Tumblr

ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ‘ಕುರುಕ್ಷೇತ್ರ’ ಸಿನಿಮಾ ನಾಳೆ( ಆ.9) ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೌರವಾಧಿಪತಿಯಾಗಿ ಕಾಣಿಸಿಕೊಂಡರೆ, ಅಭಿಮನ್ಯುವಾಗಿ ಯುವನಟ ನಿಖಿಲ್ ಕುಮಾರಸ್ವಾಮಿ ಬಣ್ಣ ಹಚ್ಚಿದ್ದಾರೆ. ಇನ್ನು ಅರ್ಜುನನಾಗಿ ಸೋನು ಸೂದ್, ಕರ್ಣನಾಗಿ ಅರ್ಜುನ್ ಸರ್ಜಾ, ಭೀಷ್ಮನಾಗಿ ರೆಬೆಲ್ ಸ್ಟಾರ್ ಅಂಬರೀಷ್ ಬಣ್ಣ ಹಚ್ಚಿದ್ದಾರೆ. ಈ ಎಲ್ಲ ಪಾತ್ರಗಳ ನಡುವೆ ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿರುವುದು ಕೃಷ್ಣನ ಅವತಾರ.

ಹೌದು, ‘ಕುರುಕ್ಷೇತ್ರ’ ಯುದ್ಧದ ಸಾರಥಿ ಕೃಷ್ಣನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆಯೇ ರವಿಮಾಮನ ಫಸ್ಟ್ ಲುಕ್​ ಬಿಡುಗಡೆಯಾಗಿ ಹೊಸ ಸಂಚಲನ ಸೃಷ್ಟಿಸಿತ್ತು. ಆದರೆ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ನಾನು ಹೆಸರಿಗಷ್ಟೇ ಕೃಷ್ಣ. ಕೃಷ್ಣನಿಗೆ 16 ಸಾವಿರ ಗೋಪಿಕೆಯರು ಇದ್ದಾರೆ. ಆದರೆ, ಇಡೀ ಸಿನಿಮಾದಲ್ಲಿ ನನಗೆ ಒಬ್ಬರೇ ಒಬ್ಬ ನಾಯಕಿಯಿಲ್ಲ ಎಂದು ರವಿಚಂದ್ರನ್ ನಿರ್ಮಾಪಕ ಮುನಿರತ್ನರನ್ನು ಕಿಚಾಯಿಸಿದ್ದರು.

ಇದರಿಂದ ರೋಮ್ಯಾಂಟಿಕ್ ಪಾತ್ರಗಳ ಮೋಡಿಗಾರ ರವಿಮಾಮನಿಗೆ ಹೀರೋಯಿನ್ ಇಲ್ಲವೇ ಎಂಬ ಪ್ರಶ್ನೆಯೊಂದು ಕೇಳಿ ಬಂದಿತ್ತು. ಹೀಗಾಗಿ ಕೃಷ್ಣನ ಪಾತ್ರಕ್ಕೂ ಇಲ್ಲಿ ಮಹತ್ವವಿರಲ್ಲ ಎಂದೇ ಹೇಳಲಾಗುತ್ತಿತ್ತು. ಆದರೀಗ ಕೃಷ್ಣನಿಗೂ ಒಬ್ಬಳು ಸಖಿ ಇರಲಿದ್ದಾರೆ ಎಂಬ ಸುದ್ದಿಯೊಂದು ಹೊರ ಬಿದ್ದಿದೆ.

ಅವರೇ ಕೃಷ್ಣ ಪತ್ನಿ ರುಕ್ಮಿಣಿ. ಈ ಪಾತ್ರದಲ್ಲಿ ಬಣ್ಣ ಹಚ್ಚಿರುವುದು ಟಾಲಿವುಡ್ ನಟಿ ಪ್ರಗ್ಯಾ ಜೈಸ್ವಾಲ್. ‘ಜಯ ಜಾನಕಿ ನಾಯಕ’ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದ ಪ್ರಗ್ಯಾ ಇಲ್ಲಿ ರವಿಮಾಮ ಜೋಡಿಯಾಗಿ ಕಾಣಿಸಲಿದ್ದಾರೆ. ಈ ಪಾತ್ರದ ಬಗ್ಗೆ ಹಿಂದೆ ಚಿತ್ರತಂಡ ಎಲ್ಲೂ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ. ಆದರೀಗ ಸಿನಿಮಾ ಬಿಡುಗಡೆಗೆ ಒಂದು ದಿನ ಮುನ್ನ ಕೃಷ್ಣನ ರುಕ್ಮಿಣಿ ಯಾರೆಂಬ ಗುಟ್ಟು ರಟ್ಟಾಗಿದೆ.

Comments are closed.