ಈಗಾಗಲೇ ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿರುವ ನಿರ್ದೇಶಕ ಮಂಸೋರೆ, ಈಗ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ತಮ್ಮ ಮೂರನೇ ನಿರ್ದೇಶನದ ಚಿತ್ರಕ್ಕೆ ಮತ್ತೊಂದು ಕುತೂಹಲ ಮೂಡಿಸುವಂಥ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ಚಿತ್ರಗಳಲ್ಲಿನಟಿಸಿರುವ ಪ್ರಮೋದ್ ಶೆಟ್ಟಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿನಟಿಸುತ್ತಿರುವುದು ವಿಶೇಷ. ಕನ್ನಡ ಮತ್ತು ತೆಲುಗಿನಲ್ಲಿನಟಿಸಿರುವ ನಟಿಯೊಬ್ಬರು ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ.
ಈ ಬಗ್ಗೆ “ಮೂರನೇ ಚಿತ್ರಕ್ಕೂ ಒಂದೊಳ್ಳೆ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅದನ್ನು ನನ್ನದೇ ಆದ ಶೈಲಿಯಲ್ಲಿಹೇಳುವ ಪ್ರಯತ್ನ ಮಾಡಿದ್ದೇನೆ” ಎಂದಿದ್ದಾರೆ ಮಂಸೋರೆ. .ವರಮಹಾಲಕ್ಷ್ಮೇ ಹಬ್ಬದ ದಿನದಂದು ಸದ್ದಿಲ್ಲದೇ ಈ ಚಿತ್ರಕ್ಕೆ ಮುಹೂರ್ತ ಕೂಡ ನಡೆದಿದೆ. ಹೊಸ ಸಿನಿಮಾದ ಮುಹೂರ್ತದ ದಿನದಂದೇ ರಾಷ್ಟ್ರ ಪ್ರಶಸ್ತಿ ಕೂಡ ಘೋಷಣೆ ಆಗಿದೆ.
‘ಇದೊಂದು ಸೋಷಿಯಲ್ ಥ್ರಿಲ್ಲರ್ ಅಂಶಗಳನ್ನಿಟ್ಟುಕೊಂಡು ಮಾಡುತ್ತಿರುವ ಸಿನಿಮಾ. ಸಮಾಜ, ವ್ಯವಸ್ಥೆ ಮತ್ತು ಮಧ್ಯಮ ವರ್ಗದವರ ಬದುಕಿನ ತಳಮಳವನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸುತ್ತಲು ಹಲವು ಸಂಗತಿಗಳು ನಡೆಯುತ್ತಿರುತ್ತವೆ. ಅವುಗಳನ್ನು ಎದುರಿಸಲು ನಾನು ಹರ ಸಾಹಸ ಪಡಬೇಕಾಗುತ್ತದೆ. ಅಂತಹ ಒಂದು ಘಟನೆಯೇ ಸಿನಿಮಾಗೆ ಪ್ರೇರಣೆ’ ಎನ್ನುತ್ತಾರೆ ನಿರ್ದೇಶಕರು.
ಈ ಸಿನಿಮಾದಲ್ಲಿಪ್ರತಿಭಾವಂತರ ತಂಡವೇ ಒಂದಾಗಿದೆ. ಉದ್ಘರ್ಷ ಸಿನಿಮಾ ನಿರ್ಮಾಣ ಮಾಡಿದ್ದ ದೇವರಾಜ್ ಆರ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಬೆಲ್‌ಬಾಟಮ್ ಖ್ಯಾತಿಯ ಟಿ.ಕೆ.ದಯಾನಂದ್ ಸಂಭಾಷಣೆ ಬರೆಯುತ್ತಿದ್ದಾರೆ. ವೀರೇಂದ್ರ ಮಲ್ಲಣ್ಣನವರ ಚಿತ್ರಕಥೆ ಚಿತ್ರಕ್ಕಿದೆ. ಸಂಕಲನಕ್ಕಾಗಿ ಈ ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಾಗೇಂದ್ರ ಕೆ. ಉಜ್ಜನಿ ಈ ಚಿತ್ರಕ್ಕೂ ಸಂಕಲನಕಾರರಾರಿ ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲಿಯೇ ಶೂಟಿಂಗ್ ಕೂಡ ಆರಂಭವಾಗಲಿದೆ.
ಹರಿವು ಚಿತ್ರಕ್ಕಾಗಿ ಮೊದಲ ರಾಷ್ಟ್ರ ಪ್ರಶಸ್ತಿ ಪಡೆದಿರುವ ಮಂಸೋರೆ, ನಾತಿಚರಾಮಿ ಚಿತ್ರಕ್ಕೆ ಈ ಬಾರಿ ಐದು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂಇವರ ಚಿತ್ರಗಳಿಗೆ ಸಾಕಷ್ಟು ಮನ್ನಣೆ ಸಿಕ್ಕಿದೆ. ಹಾಗಾಗಿ ಮೂರನೇ ಸಿನಿಮಾದ ಬಗ್ಗೆ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದೆ.
Comments are closed.