ಮನೋರಂಜನೆ

ಕೋಮಲ್ ಮೇಲೆ ಹಲ್ಲೆ ಮಾಡಿದವರನ್ನು ಸುಮ್ಮನೆ ಬಿಡಲ್ಲ: ಜಗ್ಗೇಶ್

Pinterest LinkedIn Tumblr


ಬೆಂಗಳೂರು: ನಟ ಕೋಮಲ್ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ನಟ ಜಗ್ಗೇಶ್ ಪ್ರತಿಕ್ರಿಯಿಸಿ, ಅವನು ಪಾಪದವನು, ಯಾರು ಈ ಹಲ್ಲೆ ನಡೆಸಿದ್ದಾರೆ ಎಂದು ಗೊತ್ತಿಲ್ಲ. ಆದರೆ ಈ ರೀತಿ ದಾದಾಗಿರಿ ಮಾಡಿದವರನ್ನು ಖಂಡಿತಾ ಸುಮ್ಮನೆ ಬಿಡಲ್ಲ ಎಂದು ಕಿಡಿಕಾರಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ತಮ್ಮ ಮಗಳನ್ನು ಟ್ಯೂಶನ್ ಗೆ ಬಿಡಲಿಕ್ಕೆ ಹೋಗ್ತಾ ಇದ್ದ. ಶ್ರೀರಾಮಪುರ ರೈಲ್ವೇ ಅಂಡರ್ ಪಾಸ್ ಬಳಿ ಬರುತ್ತಿದಾಗ ಈ ಘಟನೆ ನಡೆದಿದೆ. ನಾಲ್ಕು ಜನ ಬೈಕ್ ಸವಾರರು ಸೈಡ್ ಕೊಟ್ಟಿಲ್ಲ ಎನ್ನುವ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ಈ ವೇಳೆ ಮೂವರು ಕೋಮಲ್ ನನ್ನು ಹಿಡಿದುಕೊಂಡಿದ್ದಾರೆ. ಇನ್ನೊಬ್ಬ ಕೋಮಲ್ ಮೇಲೆ ಹಲ್ಲೆ ಮಾಡಿದ್ದಾನೆ. ನಾಲ್ಕು ಜನ ಕುಡಿದು ಹೊಡೆದಿದ್ದಾರೆ. ಈ ರೀತಿ ದಾದಾಗಿರಿ ಮಾಡುವವರನ್ನು ಪೊಲೀಸರು ಸುಮ್ಮನೆ ಬಿಡಬಾರದು. ಹಲ್ಲೆ ನಡೆಸಿದವರನ್ನು ಖಂಡಿತಾ ನಾನು ಸುಮ್ಮನೆ ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರೀತಿಯ ಘಟನೆಗಳು ಬೆಂಗಳೂರಿನಲ್ಲಿ ಆಗಬಾರದು. ನನ್ನ ತಮ್ಮ ಅಥವಾ ನಟ ಮೇಲೆ ಹಲ್ಲೆ ನಡೆದಿದೆ ಎಂದು ನಾನು ಈ ಮಾತು ಹೇಳುತ್ತಿಲ್ಲ. ಯಾರಿಗೂ ಕೂಡ ಹೀಗೆ ಆಗಬಾರದು. ಕುಡಿದು, ಗಾಂಜಾ ಸೇವಿಸಿ ನಶೆಯಲ್ಲಿ ಪುಂಡರು ಈ ರೀತಿ ಬೆಂಗಳೂರು ನಗರದಲ್ಲಿ ಗಲಾಟೆ ಮಾಡಿದರೆ ಏನು ಅರ್ಥ? ಯಾರು ಏನ್ ಮಾಡಿದ್ದಾರೆ ಎಂದು ನನಗೆ ಗೊತ್ತಾಗುತ್ತೆ. ಇಂಡಸ್ಟ್ರಿಯವರು ಮಾಡಿದ್ದಾರಾ ಅಥವಾ ಬೇರೆಯವರು ಹಲ್ಲೆ ಮಾಡಿದ್ದಾರ ಗೊತ್ತಿಲ್ಲ ಎಂದರು.

ನಾನು ಮುವತ್ತು ವರ್ಷದಿಂದ ಇಂಡಸ್ಟ್ರಿಯಲ್ಲೇ ಇದ್ದೇನೆ. ನನಗೆ ಅವಾಚ್ಯ ಪದಗಳಲ್ಲಿ ಬೈಯೋದು ಗೊತ್ತು. ಆದರೆ ಕೋಮಲ್ ಪಾಪದವನು, ಅವನಿಗೆ ಇವೆಲ್ಲಾ ಗೊತ್ತಾಗಲ್ಲ. ಅಂತ ಅಮಾಯಕನ ಮೇಲೆ ಹಲ್ಲೆ ಮಾಡಿದ್ದಾರೆ ಅವರನ್ನು ಸುಮ್ಮನೆ ಬಿಡಲ್ಲ. ಅವರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಆಗಲೇಬೇಕು ಎಂದು ಹರಿಹಾಯ್ದರು.

Comments are closed.