ದುಬೈ: ತುಳು ಚಿತ್ರರಂಗದಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ‘ಗಿರ್‌ಗಿಟ್’ ತುಳು ಸಿನೆಮಾ ಶುಕ್ರವಾರ ತುಳುನಾಡು ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದು, ತುಳು ಸಿನಿರಸಿಕರು ಸಿನೆಮಾ ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಹಳ ಸಮಯದ ನಂತರ ತುಳು ಚಿತ್ರರಂಗದಲ್ಲಿ ಒಂದೊಳ್ಳೆಯ ಹಾಸ್ಯಮಯ-ಮನರಂಜನಾ ಚಿತ್ರ ನೋಡಿದ ಸಂತಸವನ್ನು ಹಂಚಿಕೊಂಡಿದ್ದಾರೆ.
ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶಿಸಿ, ನಾಯಕ ನಟನಾಗಿ ನಟಿಸಿರುವ ‘ಗಿರ್‌ಗಿಟ್’ ತುಳುಚಿತ್ರದಲ್ಲಿನ ಚಿತ್ರಕಥೆ- ಸಂಭಾಷಣೆ -ಕಥಾವಸ್ತು- ಸಂವಾದ -ಹಾಸ್ಯಮಯ ಸನ್ನಿವೇಶಗಳು ಸೇರಿದಂತೆ ಎಲ್ಲವೂ ಉತ್ತಮವಾಗಿ ಮೂಡಿಬಂದಿದ್ದು, ಇದು ತುಳು ಸಿನಿರಸಿಕರ ಮನಗೆಲ್ಲುವಲ್ಲಿ ಸಫಲವಾಗಿದೆ.
ತುಳು ಚಿತ್ರರಂಗದಲ್ಲಿ ರೂಪೇಶ್ ಶೆಟ್ಟಿ ‘ಗಿರ್‌ಗಿಟ್’ ಮೂಲಕ ಒಬ್ಬ ಒಳ್ಳೆಯ ನಟನ ಜೊತೆಗೆ ನಿರ್ದೇಶಕನಾಗುವ ಭರವಸೆಯನ್ನು ಹುಟ್ಟುಹಾಕಿದ್ದು, ಜೊತೆಗೆ ಸಿನೆಮಾ ನೋಡಿದವರನ್ನೆಲ್ಲ ‘ಗಿರ್‌ಗಿಟ್’ ನಂತೆ ತಿರುಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತಿಭಾವಂತ ಹಾಸ್ಯ ನಟರಾಗಿರುವ ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್ ಹಾಗು ಉಮೇಶ್ ಮಿಜಾರ್ ಅವರು ತಮ್ಮ ನಟನೆ ಮೂಲಕ ಜನರನ್ನು ನಕ್ಕು ನಗಿಸಿದ್ದಾರೆ. ಜೊತೆಗೆ ಇವರ ಹಾಸ್ಯಮಯ ನಟನೆ ಚಿತ್ರದ ವಿರಾಮದ ನಂತರದ ಭಾಗವನ್ನು ಮತ್ತೊಂದು ಹಂತಕ್ಕೆ ಕೊಡೊಯ್ಯುತ್ತದೆ.
ರೂಪೇಶ್ ಶೆಟ್ಟಿ ನಟನೆಯಲ್ಲಿ ಪ್ರಬುದ್ಧತೆ ಮೆರೆದಿದ್ದಾರೆ. ಒಬ್ಬ ಒಳ್ಳೆಯ ನಟನಾಗುವ ಎಲ್ಲ ಲಕ್ಷಣಗಳನ್ನು ರೂಪೇಶ್ ಶೆಟ್ಟಿ ನಟನೆಯಲ್ಲಿ ತೋರಿಸಿದ್ದಾರೆ. ನಾಯಕಿ ನಟಿಯಾಗಿ ಮೊದಲ ಬಾರಿಗೆ ಬಣ್ಣಹಚ್ಚಿರುವ ನಟಿ ಶಿಲ್ಪಾ ಶೆಟ್ಟಿ ನಟನೆ ಚಿತ್ರರಂಗದಲ್ಲಿ ಭರವಸೆ ಮೂಡಿಸುವಂತಿದೆ. ಖಳನಟನ ಪಾತ್ರದಲ್ಲಿ ಅಭಿನಯಿಸಿರುವ ರೋಶನ್ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ತುಂಬಿದ್ದು, ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ಪ್ರಸನ್ನ ಶೆಟ್ಟಿ ಅವರ ಸಂಭಾಷಣೆ ಚಿತ್ರದ ಯಶಸ್ವಿಗೆ ಹಿಡಿದ ಕನ್ನಡಿಯಾಗಿದೆ. P K ದಾಸ್ ಅವರ ಛಾಯಾಗ್ರಾಹಣ, ಚಿತ್ರದ ಸಂಗೀತ, ಹಿನ್ನೆಲೆ ಸಂಗೀತ, ಹಾಡು, ಎಲ್ಲವೂ ಚಿತ್ರದ ಯಶಸ್ಸಿಗೆ ಪೂರಕವಾಗಿದೆ.
ತುಳು ಸಿನಿ ರಸಿಕರು ನೋಡುವಂಥ ಒಂದೊಳ್ಳೆಯ ಮನರಂಜನಾತ್ಮಕ ಸಿನೆಮಾವನ್ನು ಕೊಟ್ಟ ಕೀರ್ತಿಗೆ ರೂಪೇಶ್ ಶೆಟ್ಟಿ ಪಾತ್ರರಾಗಿದ್ದಾರೆ.
Comments are closed.