ಮುಂಬೈ: ಬಹು ಅಂಗಾಂಗ ವೈಫಲ್ಯದಿಂದ ಹಿಂದಿ ಮತ್ತು ಮರಾಠಿ ಚಿತ್ರರಂಗದ ಹಿರಿಯ ನಟ ವಿಜು ಕೋಟೆ ಸೋಮವಾರ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಶೋಲೆ ಸಿನಿಮಾದಲ್ಲಿ ಡಕಾಯಿತ ಕಾಲಿಯಾ ಮತ್ತು ಅಂದಾಜ್ ಅಪ್ನಾ ಅಪ್ನಾ ಚಿತ್ರದಲ್ಲಿ ರಾಬರ್ಟ್ ಇವರ ಬಹು ಜನಪ್ರಿಯ ಪಾತ್ರಗಳು.
ಇಂದು ನಸುಕಿನ ಜಾವ 6.55ರ ಸುಮಾರಿಗೆ ತಮ್ಮ ನಿವಾಸದಲ್ಲಿ ವಿಜು ಕೋಟೆ ನಿಧನರಾಗಿದ್ದಾರೆ. ಹಲವು ಸಮಯಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಕೊನೆ ದಿನಗಳನ್ನು ಕಳೆಯುವುದು ಅವರಿಗೆ ಇಷ್ಟವಿರಲಿಲ್ಲ, ಹಾಗಾಗಿ ಮನೆಗೆ ಕರೆದುಕೊಂಡು ಬಂದೆವು. ನಮಗೆಲ್ಲಾ ಅವರ ಅಗಲಿಕೆ ತೀವ್ರ ದುಃಖವನ್ನುಂಟುಮಾಡಿದೆ ಎಂದು ಅವರ ಸಂಬಂಧಿ ಭಾವನ ಬಲ್ಸವರ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಚಂದನ್ ವಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಜನಪ್ರಿಯ ಸಿನಿಮಾಗಳಾದ ‘ಖಯಾಮತ್ ಸೆ ಖಯಾಮತ್ ತಕ್,’ ‘ವೆಂಟಿಲೇಟರ್’ ಮತ್ತು ಟಿವಿ ಶೋ ‘ಝಬಾನ್ ಸಂಬಾಲ್ಕೆ’ ಗಳಲ್ಲಿ ಇವರು ನಟಿಸಿದ್ದರು.
Comments are closed.