ಮುಂಬಯಿ: ನಿರ್ದೇಶಕ ಅಶುತೋಷ್ ಗೋವರಿಕರ್ ಅವರ ಕಲ್ಪನೆಯಲ್ಲಿ ಮೂಡಿಬಂದ ಐತಿಹಾಸಿಕ ಹಿನ್ನಲೆಯುಳ್ಳ ಚಿತ್ರ ‘ಪಾಣಿಪತ್’ ಬೆಳ್ಳಿತೆರೆಯಲ್ಲಿ ದೊಡ್ಡ ಸದ್ದು ಮಾಡುವಲ್ಲಿ ವಿಫಲವಾಗಿದೆ. ಅರ್ಜುನ್ ಕಪೂರ್, ಕೃತಿ ಸನೋನ್, ಸಂಜಯ್ ದತ್ ಮೊದಲಾದವರ ಭರ್ಜರಿ ತಾರಾಗಣವಿದ್ದು, ಐತಿಹಾಸಿಕ ಹಿನ್ನಲೆಯ ಕಥೆಯನ್ನು ಹೊಂದಿದ್ದರೂ ಮತ್ತು ಭರ್ಜರಿ ವಿ.ಎಫ್.ಎಕ್ಸ್. ಕೌಶಲಗಳಿದ್ದರೂ ಪಾಣಿಪತ್ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂದೇ ಇದೀಗ ವಿಶ್ಲೇಷಿಸಲಾಗುತ್ತಿದೆ.
ಡಿಸೆಂಬರ್ 06ರಂದು ತೆರೆಕಂಡ ಈ ಚಿತ್ರ ಇದೀಗ ಮೂರನೇ ವಾರವನ್ನು ಪೂರೈಸಿದ್ದು ಇದುವರೆಗೆ ಒಟ್ಟಾರೆಯಾಗಿ 32.62 ಕೋಟಿ ಗಳಿಕೆಯನ್ನು ಕಂಡಿದೆ. ಮೂರನೇ ವಾರಾಂತ್ಯದಲ್ಲಿ ಪಾಣಿಪತ್ ಗಳಿಕೆ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಈ ಚಿತ್ರ ದೇಶಾದ್ಯಂತ ಡಿ.20 ಶುಕ್ರವಾರ 11 ಲಕ್ಷ, ಶನಿವಾರ 23 ಲಕ್ಷ ಮತ್ತು ಆದಿತ್ಯವಾರದಂದು 32.62 ಲಕ್ಷ ಗಳಿಸುವಲ್ಲಿ ಶಕ್ತವಾಗಿದೆ.
ಚಿತ್ರದಲ್ಲಿ ಅರ್ಜುನ್ ಕಪೂರ್ ಸದಾಶಿವ್ ರಾವ್ ಭಾವೂ ಪಾತ್ರವನ್ನು ನಿರ್ವಹಿಸಿದ್ದು, ಕೃತಿ ಸನೋನ್ ಪಾರ್ವತಿ ಭಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ಚಿತ್ರದಲ್ಲಿ ಪ್ರೇಕ್ಷಕರ ವಿಶೇಷ ಪ್ರಶಂಸೆಗೆ ಪಾತ್ರವಾಗಿದ್ದು ಸಂಜಯ್ ದತ್ ನಿರ್ವಹಿಸಿರುವ ಅಬ್ದಾಲಿ ಪಾತ್ರ.
ಆದರೆ ಚಿತ್ರದಲ್ಲಿ ಉಳಿದ ಪಾತ್ರಧಾರಿಗಳ ನಿರ್ವಹಣೆ ಮತ್ತು ಒಟ್ಟಾರೆ ಚಿತ್ರದ ಕುರಿತಾಗಿ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Comments are closed.