ಕನ್ನಡ ಮಾತ್ರವಲ್ಲದೆ, ಬಹುಭಾಷೆಯಲ್ಲಿ ರಶ್ಮಿಕಾ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಅವರ ಜತೆ ಮಾತನಾಡಬೇಕು ಎಂಬ ಆಸೆ ಅಭಿಮಾನಿಗಳಿಗೆ ಸಹಜವಾಗಿಯೇ ಇರುತ್ತದೆ. ಹಾಗಂತ ಅವರು ನೇರವಾಗಿ ಸಿಕ್ಕಿ ಬಿಡುತ್ತಾರಾ? ಖಂಡಿತಾ ಅದು ಅಸಾಧ್ಯ. ಅದರ ಬದಲು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಲು ರಶ್ಮಿಕಾ ಸಿದ್ಧರಾಗಿದ್ದಾರೆ.
ಟ್ರೆಂಡ್ ಆಗುತ್ತಿದೆ #RashmikaReplies
ರಶ್ಮಿಕಾಗೆ ನೀವೇನಾದರೂ ಪ್ರಶ್ನೆ ಕೇಳಬೇಕೆಂದುಕೊಂಡಿದ್ದರೆ ಅದಕ್ಕೆ ಟ್ವಿಟರ್ ಮೂಲಕ ವೇದಿಕೆ ಸಿದ್ಧವಾಗುತ್ತಿದೆ. #RashmikaReplies ಎಂಬ ಹ್ಯಾಶ್‌ಟ್ಯಾಗ್ ಬಳಸಿ, ಅದರ ಜತೆಯಲ್ಲಿ ನಿಮ್ಮ ಪ್ರಶ್ನೆಯನ್ನು ಟ್ವೀಟ್ ಮಾಡಬೇಕು. ಅದನ್ನು ಗಮನಿಸುವ ರಶ್ಮಿಕಾ ಟ್ವಿಟರ್ ಮೂಲಕವೇ ಉತ್ತರ ನೀಡಲಿದ್ದಾರೆ. ಈ ಬಗ್ಗೆ ಜ.4ರಂದು ಸ್ವತಃ ರಶ್ಮಿಕಾ ಟ್ವೀಟ್ ಮಾಡಿದ್ದರು. ‘ನಾನು ಚಿತ್ರರಂಗಕ್ಕೆ ಕಾಲಿಟ್ಟು ಮೂರು ವರ್ಷ ಪೂರೈಸಿರುವುದಕ್ಕೆ ನೀವೆಲ್ಲರೂ ಇತ್ತೀಚೆಗೆ ಸಂಭ್ರಮಪಟ್ಟಿದ್ದೀರಿ. ಆದರೆ ಆ ಸಮಯದಲ್ಲಿ ನಾನು ಭಾರತದಲ್ಲಿ ಇರಲಿಲ್ಲ. ಈಗ ವಾಪಸು ಬಂದಿದ್ದೇನೆ. ನಿಮಗಾಗಿ ಒಂದು ವಿಶೇಷ ಇದೆ. #RashmikaReplies ಹ್ಯಾಶ್‌ಟ್ಯಾಗ್ ಬಳಸಿ ನನಗೆ ಪ್ರಶ್ನೆ ಕೇಳಿರಿ’ ಎಂದು ಅವರು ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಇದು ರಾಷ್ಟ್ರ ಮಟ್ಟದಲ್ಲಿ ಟ್ರೆಂಡ್ ಆಗಿದೆ.
ಕೆಲವೇ ನಿಮಿಷಗಳಲ್ಲಿ ಪ್ರಶ್ನೆಗಳ ಸುರಿಮಳೆ
ಟ್ವಿಟರ್‌ನಲ್ಲಿ ರಶ್ಮಿಕಾಗೆ ಏಳೂವರೆ ಲಕ್ಷಕ್ಕಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಅವರೆಲ್ಲರಿಂದಲೂ #RashmikaReplies ಟ್ವೀಟ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವೇ ನಿಮಿಷಗಳಲ್ಲಿ ಪ್ರಶ್ನೆಗಳ ಸುರಿಮಳೆಯೇ ಆಗಿದೆ. ಸಿನಿಮಾ ಮತ್ತು ಖಾಸಗಿ ಬದುಕಿಗೆ ಸಂಬಂಧಿಸಿದಂತೆ ಸಾವಿರಾರು ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಅವುಗಳ ಪೈಕಿ ರಶ್ಮಿಕಾ ಯಾವುದಕ್ಕೆ ಉತ್ತರಿಸುತ್ತಾರೆ? ಯಾವುದಕ್ಕೆ ಮೌನ ವಹಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಮೂರು ವರ್ಷ ಪೂರೈಸಿದ ಸಂಭ್ರಮ
‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ ರಶ್ಮಿಕಾ ಮಂದಣ್ಣ ಈಗ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದ್ದಾರೆ. ಪರಭಾಷೆಯ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ. ಟಾಲಿವುಡ್ ಮತ್ತು ಕಾಲಿವುಡ್‌ನ ಸ್ಟಾರ್ ನಟರ ಜತೆ ತೆರೆಹಂಚಿಕೊಳ್ಳುವ ಅವಕಾಶವನ್ನು ಗಿಟ್ಟಿಸಿಕೊಂಡರು. ‘ಭೀಷ್ಮ’, ‘ಸರಿಲೇರು ನೀಕೆವ್ವರು’, ‘ಸುಲ್ತಾನ್’, ‘ಪೊಗರು’ ಮುಂತಾದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅವರು ತೊಡಗಿಕೊಂಡಿದ್ದು, 2020ರಲ್ಲಿ ಈ ಎಲ್ಲ ಚಿತ್ರಗಳು ಧೂಳೆಬ್ಬಿಸಲಿವೆ.
Comments are closed.