ಮನೋರಂಜನೆ

ಸ್ಯಾಂಡಲ್​ವುಡ್ ನಿರ್ದೇಶಕನೊಂದಿಗೆ ನಾಪತ್ತೆಯಾದ ನಟಿ; ಕಿಡ್ನಾಪ್ ದೂರು ನೀಡಿದ ಪೋಷಕರು ! ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

Pinterest LinkedIn Tumblr

ಸ್ಯಾಂಡಲ್​ವುಡ್ ನಿರ್ದೇಶಕನೊಂದಿಗೆ ನಟಿಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ನಿರ್ದೇಶಕ ಆಂಜಿನಪ್ಪ ಎಂಬುವರು ತಮ್ಮ ಮಗಳನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ನಟಿ ವಿಜಯಲಕ್ಷ್ಮಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ನಟಿ ವಿಜಯಲಕ್ಷ್ಮಿ ಜವಾರಿ ಇನ್ ಲವ್, ರಾಜೀವ ಸೇರಿದಂತೆ ಕನ್ನಡದಲ್ಲಿ 15ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಮಗಳು ಕಾಣೆಯಾಗಿರುವುದರಿಂದ ಮನನೊಂದಿರುವ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ನಟಿಯ ಅಜ್ಜಿ ಕೂಡ ತೀರಿಕೊಂಡಿದ್ದು, ಇದಾದರೂ ವಿಜಯಲಕ್ಷ್ಮಿ ನೋಡಲು ಬಂದಿರಲಿಲ್ಲ. ಅಲ್ಲದೆ ನಟಿಯನ್ನು ಸಂಪರ್ಕಿಸಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ಮನೆಯಿಂದ ತುಂಗಾಭದ್ರ ಚಿತ್ರದ ಶೂಟಿಂಗ್​ಗೆ ಎಂದು ತೆರಳಿದ್ದ ನಟಿ, ಆ ಬಳಿಕ ರಿಜಿಸ್ಟರ್ ಮದುವೆಯಾಗಿರುವುದಾಗಿ ತಿಳಿಸಿದ್ದರು. ಆನಂತರ ಮನೆಗೆ ಹಿಂತಿರುಗಿದರೂ, ಕೆಲವೇ ದಿನಗಳಲ್ಲಿ ಮತ್ತೊಮ್ಮೆ ವಿಜಯಲಕ್ಷ್ಮಿ ಹೇಳದೆ ಮನೆ ಬಿಟ್ಟು ಹೋಗಿದ್ದರು. ಈ ಹಿನ್ನಲೆಯಲ್ಲಿ ನಟಿ ಪೋಷಕರು ಆಂಜಿನಪ್ಪ ತಮ್ಮ ಮಗಳನ್ನು ಅಪಹರಿಸಿದ್ದಾನೆ ಎಂದು ಮಂಡ್ಯ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸದ್ಯ ನಟಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ತಾಯಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಒಮ್ಮೆ ಮರಳುವಂತೆ ಕುಟುಂಬದವರು ಕೇಳಿಕೊಂಡಿದ್ದಾರೆ.

ಅಲ್ಲದೆ ಅತ್ತ ತುಂಗಾಭದ್ರ ಚಿತ್ರದ ಶೂಟಿಂಗ್​ನಲ್ಲೂ ಭಾಗವಹಿಸಿಲ್ಲ. ಹೀಗಾಗಿ ಚಿತ್ರದ ನಿರ್ಮಾಪಕರು ನಟಿಗೆ ನೀಡಿದ್ದ ಹಣವನ್ನು ಹಿಂತಿರುಗಿಸುವಂತೆ ವಿಜಯಲಕ್ಷ್ಮಿ ಪೋಷಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

Comments are closed.