ಮನೋರಂಜನೆ

ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಲು ಜೆಎನ್ ಯುಗೆ ದೀಪಿಕಾ ಪಡುಕೋಣೆ ಭೇಟಿ

Pinterest LinkedIn Tumblr


ನವದೆಹಲಿ: ದೆಹಲಿಯ ಪ್ರತಿಷ್ಠಿತ ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ಭಾನುವಾರ ನಡೆದ ಗೂಂಡಾ ದಾಳಿ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಂದು ಜೆಎನ್ ಯು ಕ್ಯಾಂಪಸ್ ಗೆ ಭೇಟಿ ನೀಡಿದ ದೀಪಿಕಾ ಪಡುಕೋಣೆ, ಹಲ್ಲೆಗೊಳಗಾದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಪ್ರತಿಭಟನಾನಿರತ ವಿದ್ಯಾರ್ಥಿಗಳು ಜೈ ಭಿಮ್, ಜೈಮ್ ಎಂದು ಘೋಷಣೆ ಕೂಗುತ್ತಿದ್ದರು. ಆದರೆ ಅವರೊಂದಿಗೆ ನಿಂತಿದ್ದ ದೀಪಿಕಾ ಪಡುಕೋಣೆ ಯಾವುದೇ ಘೋಷಣೆ ಕೂಗದೇ ಮೌನವಾಗಿಯೇ ಪ್ರತಿಭಟಿಸಿದರು. ಅಲ್ಲದೆ ಈ ವೇಳೆ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ಅಥವಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿಲ್ಲ.

ಇದಕ್ಕೂ ಮೊದಲು ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದ ದೀಪಿಕಾ ಪಡುಕೋಣೆ, ಸಾಮಾಜಿಕವಾಗಿ ನಾವು ಯಾರು ಭೀತಿಗೊಂಡಿಲ್ಲ ಎನ್ನುವುದು ಹೆಮ್ಮೆಯ ವಿಚಾರ ಎಂದಿದ್ದರು.

ಬಾಲಿವುಡ್ ನ ಹಲವು ತಾರೆಯರು ಕಳೆದ ಭಾನುವಾರ ಜೆಎನ್ ಯು ನಲ್ಲಿ ನಡೆದ ಹಿಂಸಾಚಾರ ಘಟನೆಯನ್ನು ಖಂಡಿಸಿದ್ದಾರೆ.

ಭಾನುವಾರ ಸಂಜೆ 6.30ರ ಸುಮಾರಿಗೆ ಮುಖ ಮುಚ್ಚಿಕೊಂಡಿದ್ದ ಅಂದಾಜು 50 ಜನರ ಗುಂಪು ವಿವಿ ಆವರಣಕ್ಕೆ ನುಗ್ಗಿತು. ಈ ಗುಂಪು ಹಾಸ್ಟೆಲ್​ಗೆ ನುಗ್ಗಿ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷೆ ಘೋಷ್ ಹಾಗೂ ಉಪನ್ಯಾಸಕರು ಸೇರಿದಂತೆ ಹಲವು ವಿದ್ಯಾರ್ಥಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.

Comments are closed.