ಮನೋರಂಜನೆ

ಗಾಯಕಿ ಸುಶ್ಮಿತಾ ಆತ್ಮಹತ್ಯೆ ಪ್ರಕರಣ- 3 ಮಂದಿ ಆರೋಪಿಗಳ ಬಂಧನ

Pinterest LinkedIn Tumblr


ಬೆಂಗಳೂರು: ಗಾಯಕಿ ಸುಶ್ಮಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿನಗರ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಗಾಯಕಿ ಸುಶ್ಮಿತಾ ಪತಿ ಶರತ್ ಕುಮಾರ್, ದೊಡ್ಡಮ್ಮ ವೈದೇಹಿ ಮತ್ತು ಸಹೋದರಿ ಗೀತಾ ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಪಾಂಡವಪುರದ ಸಂಬಂಧಿಕರ ಮನೆಯಲ್ಲಿ ಅವಿತಿದ್ದರು. ಖಚಿತ ಮಾಹಿತಿ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಠಾಣಾ ಇನ್ಸ್ ಪೆಕ್ಟರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

ಫೆಬ್ರವರಿ 16ರಂದು ರಾತ್ರಿ ಗಾಯಕಿ ಸುಶ್ಮಿತಾ ಮಾಳಗಾಳದಲ್ಲಿರುವ ತಾಯಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಸಾವಿಗೂ ಮುನ್ನ ಸಹೋದರ ಮತ್ತು ತಾಯಿಗೆ ಸುಶ್ಮಿತಾ ಸಂದೇಶ ರವಾನಿಸಿದ್ದರು. ತನ್ನ ಸಾವಿಗೆ ಗಂಡ, ಆತನ ದೊಡ್ಡಮ್ಮ ಹಾಗೂ ಸಹೋದರಿಯೇ ಕಾರಣ. ಮೂವರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಹೇಳಿದ್ದರು.

ಈ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಮಾಡುತ್ತಿದ್ದರು. ಕೊನೆಗೆ ಇಂದು ಪಾಂಡವಪುರದ ಸಂಬಂಧಿಕರ ಮನೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಏನಿದು ಪ್ರಕರಣ?
ಸುಶ್ಮಿತಾ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ಶರತ್ ಕುಮಾರ್ ಅವರನ್ನು ಮದುವೆ ಆಗಿದ್ದರು. ಸುಶ್ಮಿತಾ ತನ್ನ ತಾಯಿ ಹಾಗೂ ತಮ್ಮನಿಗೆ ವಾಟ್ಸಪ್ ಮೂಲಕ ಸಂದೇಶ ರವಾನಿಸಿ ನಾಗರಬಾವಿಯಲ್ಲಿರುವ ತನ್ನ ತಾಯಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಎಂಬಿಎ ಪದವೀಧರೆ ಆಗಿರುವ ಸುಶ್ಮಿತಾ ‘ಹಾಲು-ತುಪ್ಪ’, ‘ಶ್ರೀಸಾಮಾನ್ಯ’ ಸೇರಿ ಹಲವು ಸಿನಿಮಾಗಳಲ್ಲಿ ಹಾಡಿದ್ದಾರೆ.

ವಾಟ್ಸಪ್‍ನಲ್ಲಿ ಕಳುಹಿಸಿದ್ದೇನು?
ಅಮ್ಮ ನನ್ನನ್ನು ಕ್ಷಮಿಸು. ನಾನು ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸು. ನನ್ನ ಪತಿ ತನ್ನ ದೊಡ್ಡಮ್ಮನ ಮಾತು ಕೇಳಿ ನನಗೆ ಚಿತ್ರಹಿಂಸೆ ಕೊಡುತ್ತಿದ್ದರು. ನಾನು ಏನೇ ಮಾತನಾಡಿದ್ರೂ ನನಗೆ ಮನೆ ಬಿಟ್ಟು ಹೋಗು ಎಂದು ಹೇಳುತ್ತಿದ್ದರು. ನನಗೆ ಮಾನಸಿಕವಾಗಿ ತುಂಬಾ ಕಿರುಕುಳ ನೀಡುತ್ತಿದ್ದರು. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ನನ್ನ ಸಾವಿಗೆ ಶರತ್, ವೈದೇಹಿ, ಗೀತಾ ನೇರವಾಗಿ ಕಾರಣ. ನಾನು ಎಷ್ಟು ಬೇಡಿಕೊಂಡರೂ ಕಾಲು ಹಿಡಿದರೂ ಅವನ ಮನಸ್ಸು ಕರಗಲಿಲ್ಲ.

ಅಲ್ಲದೆ ಶರತ್ ಮನೆಯಲ್ಲಿ ನನಗೆ ಸಾಯಲು ಇಷ್ಟವಿರಲಿಲ್ಲ. ಮದುವೆ ಆದಾಗಿನಿಂದ ಇದೇ ರೀತಿ ಹಿಂಸೆ. ಅಮ್ಮ ಯಾರ ಹತ್ತಿರ ಈ ನೋವನ್ನು ಹೇಳಿಕೊಂಡಿರಲಿಲ್ಲ. ನನ್ನನ್ನು ನಮ್ಮ ಊರಿನಲ್ಲಿ ಮಣ್ಣು ಮಾಡು ಅಥವಾ ಸುಡು. ನನ್ನ ಕಾರ್ಯವನ್ನು ತಮ್ಮನೇ ಮಾಡಲಿ. ಅವರನ್ನ ಮಾತ್ರ ಸುಮ್ಮನೆ ಬಿಡಬೇಡ, ಇಲ್ಲದಿದ್ದರೆ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲ. ಅಮ್ಮ ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಿನಗೋಸ್ಕರ ನನ್ನ ತಮ್ಮ ಸಚಿನ್ ಇದ್ದಾನೆ. ಅವನನ್ನು ಚೆನ್ನಾಗಿ ನೋಡಿಕೊ. ಕೊನೆಯಾದಾಗಿ ತಮ್ಮ ಬಳಿ ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ ಎಂದು ಸುಶ್ಮಿತಾ ವಾಟ್ಸಪ್‍ನಲ್ಲಿ ಕಳುಹಿಸಿದ್ದರು.

Comments are closed.