ಮುಂಬೈ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಹೋರಾಟ ನಡೆಸುತ್ತಿದೆ. ಈ ಹೋರಾಟಕ್ಕೆ ಸಾಮಾನ್ಯ ಜನರು, ಉದ್ಯಮಿಗಳು, ಸೆಲೆಬ್ರಿಟಿಗಳು ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ. ತಮ್ಮ ಕೈಲಾದ ಧನ ಸಹಾಯ ಮಾಡುವ ಮೂಲಕ ಸೋಂಕಿತ ವಿರುದ್ಧ ಹೋರಾಡಲು ನೆರವಾಗಿದ್ದಾರೆ. ಈಗ ಈ ಸಾಲಿಗೆ ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರು ಕೂಡ ಸೇರಿದ್ದು, PM-CARES Fundಗೆ ಬರೋಬ್ಬರಿ 25 ಕೋಟಿ ರೂ. ದೇಣಿಗೆ ನೀಡಲು ಮುಂದಾಗಿದ್ದಾರೆ.
ಮಹಾಮಾರಿ ಕೊರೊನಾ ಹರಡುವುದನ್ನು ನಿಯಂತ್ರಿಸಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕೂಡ ಕಷ್ಟ ಪಡುತ್ತಿದ್ದು, ಇದನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನರಿಂದಲೇ ದೇಣಿಗೆ ಸ್ವೀಕರಿಸಲು ಮುಂದಾಗಿದ್ದಾರೆ. PM-CARES Fund ಮೂಲಕ ಹಣ ಸಂಗ್ರಹ ಮಾಡುವುದಾಗಿ ಮೋದಿ ಅವರು ತಿಳಿಸಿದ್ದಾರೆ. ಇತ್ತ ಮೋದಿ ಅವರು PM-CARES Fundಗೆ ದೇಣಿಗೆ ನೀಡುವಂತೆ ಕೋರುತ್ತಿದ್ದಂತೆ ಅಕ್ಷಯ್ ಕುಮಾರ್ ಬರೋಬ್ಬರಿ 25 ಕೋಟಿ ರೂ. ದೇಣಿಗೆ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.
‘ಈ ಸಮಯದಲ್ಲಿ ಜನರ ಪ್ರಾಣವೇ ಎಲ್ಲಕ್ಕಿಂತ ಮುಖ್ಯ. ಅದಕ್ಕಾಗಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನು ನಾವು ಮಾಡಬೇಕು. ನಾನು ನನ್ನ ಉಳಿತಾಯದ ಹಣದಲ್ಲಿ 25 ಕೋಟಿ ರೂ. ಗಳನ್ನು ನರೇಂದ್ರ ಮೋದಿಯವರ PM-CARES Fundಗೆ ನೀಡುವುದಾಗಿ ಪ್ರಮಾಣಿಸುತ್ತಿದ್ದೇನೆ. ನಾವೆಲ್ಲ ಒಂದಾಗಿ ಜೀವ ಉಳಿಸೋಣ. ಜೀವ ಇದ್ದರೆ ಜಗತ್ತು’ ಎಂದು ಬರೆದು ಪ್ರಧಾನಿಗಳ ಟ್ವೀಟ್‍ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಅಕ್ಷಯ್ ಕಾರ್ಯ ಎಲ್ಲರ ಮನ ಗೆದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ‘ನೀವೇ ರಿಯಲ್ ಹೀರೋ’ ಎಂದು ಜನರು ಆಕ್ಷನ್ ಕಿಂಗ್‍ನನ್ನು ಹೊಗಳುತ್ತಿದ್ದಾರೆ. ಇತ್ತ ದೇಶದಲ್ಲಿ ಕೊರೊನಾ ವೈರಸ್ ಹರಡಲು ಆರಂಭ ಆದಾಗಿನಿಂದ ಅಭಿಮಾನಿಗಳಿಗೆ ಅಕ್ಷಯ್ ಕುಮಾರ್ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಲಾಕ್‍ಡೌನ್ ಆದೇಶ ಇದ್ದರೂ ರಸ್ತೆಗಳಲ್ಲಿ ಜನರು ಗುಂಪು ಗುಂಪಾಗಿ ಓಡಾಡುತ್ತಿರುವುದನ್ನು ಖಂಡಿಸಿ ಅಭಿಮಾನಿಗಳಿಗೆ ಅಕ್ಷಯ್ ಎಚ್ಚರಿಕೆಯನ್ನೂ ನೀಡಿದ್ದರು.
ಸೂಪರ್ ಸ್ಟಾರ್ ರಜನೀಕಾಂತ್, ನಟ ಅಲ್ಲು ಅರ್ಜುನ್, ಪ್ರಭಾಸ್, ಪವನ್ ಕಲ್ಯಾಣ್, ನಿತಿನ್, ಮಹೇಶ್ ಬಾಬು, ರಾಮ್ ಚರಣ್, ಹೃತಿಕ್ ರೋಷನ್, ಕಪಿಲ್ ಶರ್ಮಾ ಕೊರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
Comments are closed.