ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಸಿನಿಮಾ ಕಾರ್ಮಿಕರ (ದಿನಗೂಲಿ ಕಾರ್ಮಿಕರು) ಅಸಹಾಯಕತೆಗೆ ಮಿಡಿದಿದ್ದು ಸಹಾಯಹಸ್ತ ಚಾಚಿದ್ದಾರೆ. ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರ ಬ್ಯಾಂಕ್ ಖಾತೆಗೆ ಹಂತಹಂತವಾಗಿ ಹಣ ಜಮೆ ಮಾಡುತ್ತಿದ್ದಾರೆ. ಇಪ್ಪತ್ತೊಂದು ದಿನಗಳ ಲಾಕ್‌ಡೌನ್ ಕಾರಣದಿಂದ ತೊಂದರೆ ಅನುಭವಿಸುತ್ತಿರುವ 25 ಸಾವಿರ ಮಂದಿ ಸಿನಿಮಾ ಕಾರ್ಮಿಕರಿಗೆ ಆರ್ಥಿಕ ಸಹಾಯ ಮಾಡುವುದಾಗಿ ಸಲ್ಮಾನ್ ಖಾನ್ ಇತ್ತೀಚೆಗೆ ಘೋಷಿಸಿದ್ದರು.
ಆ ಪ್ರಕಾರವಾಗಿ ಮಂಗಳವಾರದಿಂದ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದಾರೆ ಎಂದು ದಿ ಫೆಡರೇಷನ್ ಆಫ್ ವೆಸ್ಟ್ರನ್ ಇಂಡಿಯಾ ಸಿನಿ ಎಂಪ್ಲಾಯಿಸ್” (FWICE) ತಿಳಿಸಿದೆ.
ಈ ಸಂದರ್ಭದಲ್ಲಿ ಎಫ್‍ಡಬ್ಲ್ಯುಐಸಿಇ ಅಧ್ಯಕ್ಷ ಬಿಎನ್ ತಿವಾರಿ ಮಾತನಾಡುತ್ತಾ, “ಚಿತ್ರೋದ್ಯಮದ ಸಿನಿಮಾ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಸಲ್ಮಾನ್ ಮೊದಲ ಕಂತಿನ ಹಣವನ್ನು ತಲಾ ರೂ.3 ಸಾವಿರದಂತೆ ಈಗಾಗಲೆ ವರ್ಗಾಯಿಸಿದ್ದಾರೆ. ಮಂಗಳವಾರದಿಂದಲೇ ಹಣ ವರ್ಗಾವಣೆಯಾಗುತ್ತಿದೆ. ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ 23 ಸಾವಿರ ಮಂದಿ ಸಿನಿಮಾ ಕಾರ್ಮಿಕರ ಪಟ್ಟಿಯನ್ನು ಅವರಿಗೆ ನೀಡಿದ್ದೆವು. ಒಮ್ಮೆಲೆ ಸಂಪೂರ್ಣ ಹಣ ನೀಡಿದರೆ ಎಲ್ಲಾ ಖರ್ಚು ಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಹಲವು ಕಂತುಗಳಲ್ಲಿ ಹಣ ನೀಡಲು ಸಲ್ಮಾನ್ ಖಾನ್ ತೀರ್ಮಾನಿಸಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.
ಮಂಗಳವಾರ ಪ್ರತಿಯೊಬ್ಬ ಸಿನಿಮಾ ಕಾರ್ಮಿಕನ ಖಾತೆಗೆ ರೂ.3 ಸಾವಿರ ವರ್ಗಾಯಿಸಿದ್ದಾರೆ. ಕೆಲವು ದಿನಗಳ ಬಳಿಕ ಮತ್ತೆ ಸಲ್ಮಾನ್ ಹಣ ವರ್ಗಾಯಿಸಲಿದ್ದಾರೆ. ಪರಿಸ್ಥಿತಿ ಸುಧಾರಿಸುವವರೆಗೂ ಸಲ್ಮಾನ್ ಅವರಿಗೆ ಸಹಾಯ ಮಾಡಲು ಬಯಸಿದ್ದಾರೆ” ಎಂದು ತಿಳಿಸಿದ್ದಾರೆ ತಿವಾರಿ.
ಇದಿಷ್ಟೇ ಅಲ್ಲದೆ ಯಶ್ ರಾಜ್ ಆರ್ಟ್ಸ್ ಸಂಸ್ಥೆ 3000 ಸಾವಿರ ಮಂದಿ ಸಿನಿಮಾ ಕಾರ್ಮಿಕರಿಗೆ ತಲಾ ರೂ. 5 ಸಾವಿರದಂತೆ ಆರ್ಥಿಕ ಸಹಾಯ ಮಾಡಿದೆ. ಸಲ್ಮಾನ್ ಖಾನ್ ಅಷ್ಟೇ ಅಲ್ಲದೆ ಬಾಲಿವುಡ್‌ನಿಂದ ಬಹಳಷ್ಟು ಮಂದಿ ಸಿನಿಮಾ ಕಾರ್ಮಿಕರ ರಕ್ಷಣೆಗೆ ಧಾವಿಸಿದ್ದಾರೆ. ಅಜಯ್ ದೇವಗನ್, ರೋಹಿತ್ ಶೆಟ್ಟಿ, ಬೋನಿ ಕಪೂರ್, ಅರ್ಜುನ್ ಕಪೂರ್ ಸಹಾಯ ಮಾಡಿದ್ದಾರೆ. ಪ್ರೊಡ್ಯೂಸರ್ ಗಿಲ್ಡ್ ಆಫ್ ಇಂಡಿಯಾ ಮಂಗಳವಾರ ರೂ.1.5 ಕೋಟಿ ಸಹಾಯ ಮಾಡಿದೆ. ಚಿತ್ರೋದ್ಯಮದಿಂದ ಒಟ್ಟು ರೂ.3 ಕೋಟಿ ಸಹಾಯಧನ ಸಿಕ್ಕಿದೆ. ಕಾರ್ಮಿಕರನ್ನು ರಕ್ಷಿಸುವುದಾಗಿ ಹಲವು ಸಿನಿಮಾ ಗಣ್ಯರು ಭರವಸೆ ನೀಡಿರುವುದಾಗಿ ತಿವಾರಿ ತಿಳಿಸಿದ್ದಾರೆ.
Comments are closed.