ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದಿಂದ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ನಟಿ ರಶ್ಮಿಕಾ ಮಂದಣ್ಣ ಈಗ ಸ್ಯಾಂಡಲ್‌ವುಡ್‌ಗಿಂತಲೂ ಪರಭಾಷೆಯಲ್ಲೇ ಹೆಚ್ಚು ಬ್ಯುಸಿ ಆಗಿದ್ದಾರೆ. ಅಲ್ಲಿ ಅವರಿಗೆ ಒಳ್ಳೊಳ್ಳೆಯ ಆಫರ್‌ಗಳು ಸಿಗುತ್ತಿವೆ. ಅಚ್ಚರಿ ಎಂದರೆ ನಟಿ ಸಾಯಿ ಪಲ್ಲವಿ ಅವರ ಪಾಲಿಗೆ ಮೀಸಲಾಗಿದ್ದ ಒಂದು ದೊಡ್ಡ ಅವಕಾಶವನ್ನು ಇತ್ತೀಚೆಗೆ ರಶ್ಮಿಕಾ ಪಡೆದುಕೊಂಡರು ಎಂಬ ಸುದ್ದಿ ಕೇಳಿಬಂದಿದೆ.
ಈ ವರ್ಷ ತೆಲುಗಿನಲ್ಲಿ ಸೂಪರ್ ಹಿಟ್ ಆದ ಕೆಲವೇ ಸಿನಿಮಾಗಳಲ್ಲಿ ‘ಸರಿಲೇರು ನೀಕೆವ್ವರು’ ಚಿತ್ರ ಕೂಡ ಒಂದು. ಮಹೇಶ್ ಬಾಬು ನಾಯಕನಾಗಿ ನಟಿಸಿದ್ದ ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬಂಪರ್ ಬೆಳೆ ತೆಗೆಯಿತು. ಅದರಲ್ಲಿ ಮಹೇಶ್‌ಗೆ ಜೋಡಿಯಾಗಿ ಮಿಂಚಿದ್ದು ರಶ್ಮಿಕಾ ಮಂದಣ್ಣ. ಆದರೆ ಅವರಿಗಿಂತಲೂ ಮುನ್ನ ಆ ಸಿನಿಮಾದ ಆಫರ್ ಹೋಗಿದ್ದು ನಟಿ ಸಾಯಿ ಪಲ್ಲವಿಗೆ ಎಂಬ ಸುದ್ದಿ ಗಾಸಿಪ್ ವಲಯದಲ್ಲಿ ಹರಿದಾಡುತ್ತಿದೆ.
ರಶ್ಮಿಕಾಗಿಂತಲೂ ಮುಂಚೆ ಟಾಲಿವುಡ್‌ನಲ್ಲಿ ಮಿಂಚಿದವರು ಸಾಯಿ ಪಲ್ಲವಿ. ಇಡೀ ದಕ್ಷಿಣ ಭಾರತದಲ್ಲಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ‘ಸರಿಲೇರು ನೀಕೆವ್ವರು’ ತಂಡ ಆಲೋಚಿಸಿತ್ತಂತೆ. ಆದರೆ ಕೊನೇ ಕ್ಷಣದಲ್ಲಿ ಅದು ಸಾಧ್ಯವಾಗಲಿಲ್ಲ. ನಂತರ ಅದೇ ಅವಕಾಶ ರಶ್ಮಿಕಾ ಪಾಲಿಗೆ ಬಂತು ಎನ್ನಲಾಗುತ್ತಿದೆ.
ಅಷ್ಟಕ್ಕೂ ಸಾಯಿ ಪಲ್ಲವಿ ಈ ಚಿತ್ರವನ್ನು ಯಾಕೆ ಒಪ್ಪಿಕೊಳ್ಳಲಿಲ್ಲ? ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಅವರು ಹೊಸ ಥರದ ಕಥೆ ಮತ್ತು ಪಾತ್ರದ ನಿರೀಕ್ಷೆಯಲ್ಲಿದ್ದಾರೆ. ‘ಸರಿಲೇರು ನೀಕೆವ್ವರು’ ಚಿತ್ರದ ಸ್ಕ್ರಿಪ್ಟ್ ಅವರಿಗೆ ಇಷ್ಟ ಆಗಿಲ್ಲದ ಕಾರಣ ನಟಿಸಲು ಒಪ್ಪಿಕೊಳ್ಳಲಿಲ್ಲ ಎಂಬ ಮಾತು ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾರೊಬ್ಬರೂ ಬಾಯಿ ಬಿಟ್ಟಿಲ್ಲ.
ಲಾಕ್‌ಡೌನ್ ಎಫೆಕ್ಟ್: ರಶ್ಮಿಕಾ ಮಂದಣ್ಣ ಸಿನಿಮಾದಿಂದ ಹೊರಬಿತ್ತು ‘ಶಾಕಿಂಗ್’ ನ್ಯೂಸ್!
ಅದೇನೇ ಇರಲಿ, ಸಿಕ್ಕ ಅವಕಾಶವನ್ನು ರಶ್ಮಿಕಾ ಸದುಪಯೋಗ ಮಾಡಿಕೊಂಡಿದ್ದಾರೆ. ಸಿನಿಪ್ರಿಯರಿಗೂ ಅವರ ನಟನೆ ಇಷ್ಟವಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಅವರಿಗೆ ತೆಲುಗು ಚಿತ್ರರಂಗದಲ್ಲಿ ಭಾರಿ ಡಿಮ್ಯಾಂಡ್ ಸೃಷ್ಟಿ ಆಗಿದೆ. ಅಲ್ಲು ಅರ್ಜುನ್ ನಾಯಕತ್ವದ ‘ಪುಷ್ಪ’ ಚಿತ್ರಕ್ಕೂ ಅವರೇ ನಾಯಕಿ. ಇನ್ನೂ ಹಲವು ಆಫರ್‌ಗಳು ರಶ್ಮಿಕಾ ಕೈಯಲ್ಲಿವೆ. ಕನ್ನಡದಲ್ಲಿ ಧ್ರುವ ಸರ್ಜಾ ಜೊತೆ ರಶ್ಮಿಕಾ ನಟಿಸಿರುವ ‘ಪೊಗರು’ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ.
Comments are closed.