ಕೊರೊನಾ ಹಲವರ ಬದುಕನ್ನು ಬದಲಾಯಿಸಿದೆ. ವೃತ್ತಿಯನ್ನೂ ಸಹ. ರಂಗಭೂಮಿ ಕಲಾವಿದ, ಸಿನಿಮಾ ನಟ ಸಿದ್ದಾರ್ಥ್ ಮಾಧ್ಯಮಿಕ ಲಾಕ್‌ಡೌನ್ ಸಮಯದಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿರುವುದು ವಿಶೇಷ. ಹೇಳಿಕೇಳಿ ಚಲನಚಿತ್ರ ನಟ. ರಂಗಭೂಮಿಯ ಹಿನ್ನೆಲೆಯುಳ್ಳವರು. ಆದರೂ ಕೊರೊನಾ ತೆರೆದಿಟ್ಟ ಬದುಕಿನ ತಿರುವಿನಲ್ಲಿ ನಡೆದ ಅನುಭವವನ್ನು ಮುಕ್ತವಾಗಿ ಅವರು ಸ್ವೀಕರಿಸಿದ್ದಾರೆ.
ಲಾಕ್‌ಡೌನ್‌ನ ಸಮಯದಲ್ಲಿ ಸಹಜವಾಗಿಯೇ ಅಭಿನಯದ ಅವಕಾಶ ಇರಲಿಲ್ಲ. ಈ ಸಂದರ್ಭದಲ್ಲಿ ಕಲಾವಿದರಿಗಾಗಿ ನೆರವು ನೀಡುವವರೂ ಅನೇಕರಿದ್ದರು. ಆದರೆ, ಅದಕ್ಕಾಗಿ ಹಂಬಲಿಸಲಿಲ್ಲ ಅವರು. ‘ನನಗೆ ದುಡಿಯುವ ಸಾಧ್ಯತೆ ಇರೋವರೆಗೆ ಸಹಾಯದ ಅಗತ್ಯ ಇಲ್ಲ. ನಾನೇ ದುಡಿದು 10 ರೂ ಸಂಪಾದಿಸಿದರೂ ಗೌರವ ಇರುತ್ತೆ. ಅದು ಕೊಡುವ ಖುಷಿ ಬೇರೆ ಯಾವುದೂ ಕೊಡೋಲ್ಲ. ನಾನು ಲ್ಯಾಬ್ ಟೆಕ್ನಿಷಿಯನ್ ಡಿಪ್ಲೊಮಾ ಮಾಡಿದ್ದೇನೆ. ನಟನಾಗಿದ್ದುಕೊಂಡು ಇನ್ನೊಂದು ಫುಲ್‌ಟೈಮ್ ಕೆಲಸ ಮಾಡುವುದು ಸಾಧ್ಯವಿರಲಿಲ್ಲ. ಇನ್ನು ರಂಗಭೂಮಿ ಕಲಾವಿದನಾಗಿದ್ದರೂ ಅಲ್ಲಿ ಸಂಪಾದನೆ ಆಗೋಲ್ಲ. ಪಾರ್ಟ್‌ಟೈಮ್ ಕೆಲಸಕ್ಕಾಗಿ ಗೂಗಲ್‌ನಲ್ಲಿ ಹುಡುಕುವಾಗ ಬಂಡವಾಳ ಇಲ್ಲದೆ, ಇದೊಂದೇ ಮಾಡಲು ಸಾಧ್ಯವಿದ್ದಿದ್ದು. ಹಾಗಾಗಿ ಇದನ್ನು ಆರಿಸಿಕೊಂಡೆ. ಲಾಕ್‌ಡೌನ್‌ಗೆ ನಾಲ್ಕೈದು ದಿನ ಮೊದಲು ಸೇರಿಕೊಂಡಿದ್ದೆ ಅಷ್ಟೆ. ಲಾಕ್‌ಡೌನ್ ಆದಾಗ ಬೇರೆ ದಾರಿ ಇಲ್ಲದೆ ಮುಂದುವರಿಸಿದೆ’ ಎನ್ನುತ್ತಾರೆ ಅವರು.
ತನಗೆ ರಂಗಭೂಮಿ ಹಿನ್ನೆಲೆ ಇದ್ದುದರಿಂದಲೇ ಈ ಕೆಲಸ ಕಷ್ಟವಾಗಲಿಲ್ಲ ಎನ್ನುತ್ತಾರೆ ಸಿದ್ದಾರ್ಥ್. ನೀನಾಸಂನಂತಹ ರಂಗತಂಡಗಳಲ್ಲಿ ಕಸ ಗುಡಿಸುವುದರಿಂದ ನಟನೆವರೆಗೆ ಎಲ್ಲವನ್ನೂ ನಾವೇ ಮಾಡುತ್ತೇವೆ. ಬದುಕುವುದನ್ನು ಕಲಿತಿರುತ್ತೇವೆ. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವಾಗಲೂ ಹೀಗೇ. ಹಾಗಾಗಿ ಒಂದು ಕೆಲಸ ಆಗಬೇಕು ಎಂದರೆ ಆಗಲೇಬೇಕು ಅಷ್ಟೆ. ಡೆಲಿವರಿ ಕೊಡುವ ಕೆಲಸ ಕಷ್ಟ ಎನ್ನಿಸಲಿಲ್ಲ. ಹುಡುಗಿಯರೂ ಫುಡ್ ಡೆಲಿವರಿ ಮಾಡುತ್ತಿದ್ದಾರೆ ಎನ್ನುತ್ತಾರವರು.
ಫುಡ್‌ನ ಮನೆ ಬಾಗಿಲಲ್ಲಿ ಇಟ್ಟು, ಫೋಟೋ ತೆಗೆದು, ಹೊರಗೆ ಬಂದ ಆನ್‌ಲೈನ್ ಮೂಲಕ ಅದನ್ನು ಕಳಿಸಿದ ನಂತರ ಕಸ್ಟಮರ್ ಹೊರಗೆ ಬರುವುದು ಇದರಲ್ಲಿನ ಪ್ರಕ್ರಿಯೆ. ಆದರೆ ಕೆಲವೊಮ್ಮೆ ಪೊಲೀಸರ ವಿಚಾರಣೆಯಿಂದಾಗಿ ಡೆಲಿವರಿ ತಡವಾಗುತ್ತಿತ್ತು ಎನ್ನುತ್ತಾರೆ ಸಿದ್ದಾರ್ಥ್. ‘ನನಗೆ ಐಸ್‌ಕ್ರೀಮ್ ಕರಗಿ ಹೋಗುತ್ತಿದೆಯಲ್ಲಾ ಅಂತ ಚಿಂತೆ. ಪೊಲೀಸರದೂ ತಪ್ಪಿಲ್ಲ. ಇನ್ನು ಕೆಲವು ಸಾರಿ ಎಲ್ಲೆಲ್ಲೋ ರಸ್ತೆಗಳನ್ನು ಜನರು, ಪೊಲೀಸರು ಬ್ಲಾಕ್ ಮಾಡಿರುತ್ತಿದ್ದರು. ಗಾಡಿಯಲ್ಲಿ ಸುತ್ತಿ ಬಳಸಿ ಹೋಗೋದಲ್ಲದೆ, ತುಂಬಾ ದೂರದವರೆಗೆ ನಡೆದು ಹೋಗಬೇಕಾಗುತ್ತಿತ್ತು. ನಿವಾಸಿಗಳೇ ನಮ್ಮ ಜತೆ ಜಗಳ ಆಡುತ್ತಿದ್ದರು. ಎಲ್ಲಕ್ಕಿಂತ ರಾತ್ರಿ ನಾಯಿಗಳ ಕಾಟ. ಅಪಾರ್ಟ್‌ಮೆಂಟ್ ಒಳಗೆ ಬಿಡುತ್ತಿರಲಿಲ್ಲ. ಕಸ್ಟಮರ್ ಹೊರಗೆ ಬರೋಕೆ 20 ನಿಮಿಷ ಬೇಕಾಗುತ್ತಿತ್ತು. ಎಷ್ಟೋ ಸಿನಿಮಾಗಳಿಗೆ ಆಗುವಂಥ ಕಥೆ ಸಿಕ್ಕಿತು’ ಎಂದು ನಗುತ್ತಾರೆ ಸಿದ್ದಾರ್ಥ್.
ಇಷ್ಟೆಲ್ಲ ಕಷ್ಟಪಟ್ಟರೂ ಕಲಾವಿದರ ಈ ಸ್ಥಿತಿಗೆ ಯಾರನ್ನೂ ಹೊಣೆಮಾಡುತ್ತಿಲ್ಲಅವರು. ‘ನಟನೆ ನನ್ನ ಆಯ್ಕೆ. ಕಲೆಯನ್ನು ದುಡಿಮೆಯ ಮಾರ್ಗ ಮಾಡಿಕೊಂಡರೆ ನಮ್ಮ ದಡ್ಡತನ ಆಗುತ್ತೆ. ಇವತ್ತಿನ ಚಿತ್ರರಂಗದ ಪರಿಸ್ಥಿತಿಯಲ್ಲಿ ನನಗೆ ನಟಿಸೋಕೆ ಅವಕಾಶ ಸಿಗುತ್ತಿರುವುದೇ ದೊಡ್ಡ ಸಂಗತಿ. ಇನ್ನು ಸಂಭಾವನೆ ಬಗ್ಗೆ ಯೋಚಿಸೋದು ಸರಿಯಲ್ಲ’ ಎನ್ನುತ್ತಾರವರು. ಆದರೆ, ಫುಡ್ ಡೆಲಿವರಿ ಬಾಯ್ ಕೆಲಸ ನನಗೆ ಹೊಸ ಜಗತ್ತನ್ನ ತೋರಿಸಿತು ಎನ್ನಲು ಮರೆಯುವುದಿಲ್ಲಅವರು.
‘ಜನರ ಮಧ್ಯೆ ಸಾಮಾನ್ಯನಂತೆ ಎಲ್ಲಿಯವರೆಗೆ ಇರುತ್ತೇನೋ ಅಲ್ಲಿಯವರೆಗೆ ನಾನು ಜೀವಂತ ನಟನಾಗಿರಲು ಸಾಧ್ಯ. ಫುಡ್ ಡೆಲಿವರಿ ಕೆಲಸ ಹೊಸ ಅನುಭವ ಕೊಟ್ಟಿತು’ ಎಂದಿದ್ದಾರೆ ಸಿದ್ದಾರ್ಥ್ ಮಾಧ್ಯಮಿಕ.
Comments are closed.