ಮನೋರಂಜನೆ

ಅಂದು ವೇಶ್ಯೆ, ಬಾರ್ ಡ್ಯಾನ್ಸರ್, ಈಗ ಬಾಲಿವುಡ್ ನ ಸ್ಕ್ರಿಫ್ಟ್ ರೈಟರ್

Pinterest LinkedIn Tumblr


ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಹೀಗೆ ಯಾವುದೇ ಭಾಷೆಯ ಸಿನಿಮಾ ಇರಲಿ ಅದರ ಕಥೆ ತುಂಬಾ ಮುಖ್ಯವಾಗಿರುತ್ತದೆ. ಸ್ಟೋರಿ ಲೈನ್ ಆಧಾರದ ಮೇಲೆ ಸಿನಿಮಾದ ಯಶಸ್ಸು ನಿಂತಿರುತ್ತದೆ. ಆ ನೆಲೆಯಲ್ಲಿ ಒಂದು ಚಿತ್ರಕ್ಕೆ ಕಥೆ ಬರೆದವರು ಕೂಡಾ ಮುಖ್ಯವಾಗುತ್ತಾರೆ. ಚಿತ್ರದ ಹೀರೋ, ಹೀರೋಯಿನ್ ರೀತಿ ಸಿನಿಮಾ ಹಿಟ್ ಆಗಲು ಕಥೆ ಬರೆದವರು ಕೂಡಾ ಸ್ಟಾರ್ ಆದರು ಕೂಡಾ ಅವರು ತೆರೆಮರೆಯಲ್ಲಿಯೇ ಇರುತ್ತಾರೆ. ಅಂತಹ ಒಬ್ಬ ಸ್ಟಾರ್ ಬರಹಗಾರ್ತಿ ಶಗುಫ್ತಾ ರಫೀಕ್!

ಬಾಲಿವುಡ್ ನ ಆಶಿಕಿ 2 ಸಿನಿಮಾದ ಕಥೆಗಾರ್ತಿಯಾಗಿರುವ ಶಗುಫ್ತಾ ಜೀವನ ಕೂಡಾ ಯಾವ ಸಿನಿಮಾ ಕಥೆಕ್ಕಿಂತ ಭಿನ್ನವಾಗಿಲ್ಲ. ಸ್ಟಾರ್ ಲೇಖಕಿಯಾಗುವ ಮುನ್ನ ಶಗುಫ್ತಾ ಎಂಬ ಹೆಣ್ಣು ಮಗಳು ಜೀವನೋಪಾಯಕ್ಕಾಗಿ ಬಾರ್ ಡ್ಯಾನ್ಸರ್ ಆಗಿ ನಂತರ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದರು. ಅಬ್ಬಾ ಅಂತ ಹುಬ್ಬೇರಿಸುವ ಮುನ್ನ ಈಕೆಯ ಯಾತನಾಮಯ ಜೀವನ ಪಯಣದತ್ತ ಕಣ್ಣು ಹಾಯಿಸಿ….

ತಂದೆ ತಾಯಿ ಯಾರು ಎಂಬುದೇ ಗೊತ್ತಿಲ್ಲ!
ಶಗುಫ್ತಾಗೆ ನಿಜಕ್ಕೂ ತನ್ನ ಪೋಷಕರು ಯಾರು ಎಂಬುದು ಗೊತ್ತಿಲ್ಲವಂತೆ. ಈಕೆಯನ್ನು ಒಬ್ಬಳು ಮಹಿಳೆ ದತ್ತು ತೆಗೆದುಕೊಂಡಿದ್ದು, ಆಕೆಗೆ ಕೋಲ್ಕತಾ ಮೂಲದ ಉದ್ಯಮಿಯೊಬ್ಬರ ಜತೆ ಸಂಬಂಧವಿತ್ತು. ಆತನ ಸಾವಿನ ನಂತರ ಕುಟುಂಬದ ಜವಾಬ್ದಾರಿ ಶುಗುಫ್ತಾ ಮೇಲೆ ಬಿದ್ದಿತ್ತು. ಉದ್ಯಮಿಯ ಸಾವಿನಿಂದ ಇಡೀ ಕುಟುಂಬ ಬಡತನದಿಂದ ಕಾಲ ಕಳೆಯುವಂತೆ ಮಾಡಿತ್ತು. ಹೀಗಾಗಿ 11 ವಯಸ್ಸಿಗೆ ಶಗುಫ್ತಾ ಖಾಸಗಿ ಪಾರ್ಟಿಗಳಲ್ಲಿ ಡ್ಯಾನ್ಸ್ ಮಾಡಿ ಅವರು ಎಸೆಯುವ ಹಣದಿಂದ ಹೊಟ್ಟೆ ಹೊರೆದುಕೊಳ್ಳುತ್ತಿದ್ದರಂತೆ!

ಸಾಕು ತಾಯಿ ಶಗುಫ್ತಾಳಿಗೆ ಶಾಸ್ತ್ರೀಯ ನೃತ್ಯಾಭ್ಯಾಸ ಮಾಡಿಸಿದ್ದರಂತೆ ಯಾಕೆಂದರೆ ಒಂದಲ್ಲಾ ಒಂದು ದಿನ ಬಾಲಿವುಡ್ ನಲ್ಲಿ ಆಕೆ ಮಿಂಚಬೇಕು ಎಂಬ ಆಸೆ ಇತ್ತಂತೆ. ಶಗುಫ್ತಾ 17ನೇ ವಯಸ್ಸಿಗೆ ಐಶಾರಾಮಿ ವ್ಯಕ್ತಿಯೊಬ್ಬನನ್ನು ವರಿಸಿದ್ದು ಆತನಿಂದ ಆರ್ಥಿಕ ನೆರವು ಪಡೆಯುತ್ತಿದ್ದರಂತೆ. ಆದರೆ ಆತನ ಜತೆಗಿನ ಸಂಬಂಧ ಹಳಸಿದ್ದರಿಂದ ಆತನನ್ನು ಬಿಟ್ಟು ವೇಶ್ಯಾವಾಟಿಕೆಗೆ ಶಗುಫ್ತಾ ಇಳಿದುಬಿಟ್ಟಿರುವುದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ವೇಶ್ಯಾವಾಟಿಕೆಗಿಂತ ಮೊದಲು ಬಾಂಬೆಯಲ್ಲಿ ಬಾರ್ ಡ್ಯಾನ್ಸರ್ ಆಗಿ ಶಗುಫ್ತಾ ಕೆಲಸ ಮಾಡಿದ್ದರು. ಆಗ ದಿನಕ್ಕೆ ಸಿಗುತ್ತಿದ್ದ ಸಂಬಳ 500 ರೂಪಾಯಿಯಂತೆ. ಆ ನಂತರ ಆಕೆ ದುಬೈಗೆ ತೆರಳಿದ್ದರು. 25ನೇ ವಯಸ್ಸಿಗೆ ಪಾಕಿಸ್ತಾನಿ ಅಭಿಮಾನಿಯೊಬ್ಬ ಅದು ಆಕೆಗಿಂತ 20 ವರ್ಷದಷ್ಟು ಹಿರಿಯ. ಮದುವೆಯಾಗುವ ಆಫರ್ ಕೊಟ್ಟಿದ್ದನಂತೆ ಅದಕ್ಕೆ ಶಗುಫ್ತಾ ಒಪ್ಪಿಗೆ ಕೂಡಾ ಸೂಚಿಸಿದ್ದಳು. ಆದರೆ ಟರ್ನಿಂಗ್ ಪಾಯಿಂಟ್ ಎಂಬಂತೆ ಮದುವೆ ಮುನ್ನ ಆತ ಆಕಸ್ಮಿಕವಾಗಿ ಸಾವನ್ನಪ್ಪಿದ್ದನಂತೆ!

ಹೀಗೆ ಕಾಲ ಕಳೆಯುತ್ತಿದ್ದ ಶಗುಫ್ತಾ ತನ್ನ ಪ್ರೀತಿಯ ಹುಡುಕಾಟವನ್ನು ಬರವಣಿಗೆಗೆ ಇಳಿಸಿದ್ದಳು. ತಾನೊಬ್ಬಳು ಕಥೆಗಾರ್ತಿಯಾಗಬೇಕೆಂಬ ಇಚ್ಛೆ ಕೂಡಾ ಹೊಂದಿದ್ದಳು. ಬಾರ್ ಹಾಗೂ ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕೆಯನ್ನು ಭೇಟಿಯಾಗುತ್ತಿದ್ದ ಜನರು ಹೇಳುತ್ತಿದ್ದ ಕಥೆಗಳೇ ಶಗುಫ್ತಾಗೆ ಬಂಡವಾಳವಾಗಿತ್ತು. ನಂತರ ಸಿನಿಮಾ ಕ್ಷೇತ್ರದತ್ತ ಒಲವು ತೋರಿದ ಶಗುಫ್ತಾ ಕೆಲವು ಪ್ರೊಡಕ್ಸನ್ ಹೌಸ್ ಗೆ ತೆರಳಿ ಸ್ಟೋರಿ ರೈಟರ್ ಕೆಲಸ ಇದೆಯಾ
ಎಂದು ಕೇಳಿದ್ದರಂತೆ, ಆದರೆ ಯಾರೂ ಆಕೆ ಬಗ್ಗೆ ಹೆಚ್ಚು ಆಸಕ್ತಿ ತೋರಿಸಲೇ ಇಲ್ಲವಂತೆ. ಶಗುಫ್ತಾ ತಾನು ಬರೆದ ಕಥೆಗಳನ್ನು ಜೋಪಾನವಾಗಿ ಇಟ್ಟುಕೊಂಡಿದ್ದರು.

ತಿರುವು ಕಂಡ ಬದುಕು!
ಹೀಗೆ ಹಲವು ವಿಫಲ ಯತ್ನದ ನಂತರ 2000ನೇ ಇಸವಿಯಲ್ಲಿ ಶಗುಫ್ತಾಗೆ ಸ್ಟಾರ್ ನಿರ್ದೇಶಕ ಮಹೇಶ್ ಭಟ್ ಜತೆ ಮಾತುಕತೆ ನಡೆಸುವ ಅವಕಾಶ ಸಿಕ್ಕಿತ್ತು. ಕೊನೆಗೆ ಭಟ್ ಪ್ರೊಡಕ್ಷನ್ ಹೌಸ್ ನಲ್ಲಿ ಸಿನಿಮಾವೊಂದರ ಕೆಲವು ದೃಶ್ಯಗಳಿಗೆ ಕಥೆ ಬರೆಯುವ ಅವಕಾಶ ಕೊಟ್ಟಿದ್ದರು. ಇದರ ಚಿಕ್ಕ ಯಶಸ್ಸು ಶಗುಫ್ತಾಳ ಬದುಕಿನ ದಿಕ್ಕನ್ನೇ ಬದಲಾಯಿಸಿ ಬಿಟ್ಟಿತ್ತು.

37ನೇ ವಯಸ್ಸಿನಲ್ಲಿ ಶಗುಫ್ತಾ ವೋ ಲಾಮೇ (Woh Lamhe) ಸಿನಿಮಾಕ್ಕೆ ಮೊದಲ ಕಥೆ ಬರೆದಿದ್ದರು. ಅಲ್ಲಿಂದ ಈವರೆಗೆ ಶಗುಫ್ತಾ 11 ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಶಗುಫ್ತಾ ಟಾಪ್ ಮೋಸ್ಟ್ ಟ್ಯಾಲೆಂಟ್ ಕಥೆಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಶಗುಫ್ತಾಳ ಸಹೋದರಿಯನ್ನು ಕೂಡಾ ಆತನ ಗಂಡ ಕೊಂದು ಬಿಟ್ಟಿದ್ದನಂತೆ. ನಂತರ ಆತನೂ ಕೂಡಾ ತನಗೆ ಗುಂಡು ಹೊಡೆದುಕೊಂಡು ಸಾವಿಗೀಡಾಗಿದ್ದನಂತೆ.

Comments are closed.