ಮನೋರಂಜನೆ

ಬಾಗಿಲು ಮುಚ್ಚಿದ ಅಮಿತಾಬ್ ಬಚ್ಚನ್‌ ರಾಯಭಾರಿಯಾಗಿದ್ದ ರಾಜ್ಯದ ರೀಡ್ ಆ್ಯಂಡ್‌ ಟೇಲರ್‌ ಕಾರ್ಖಾನೆ

Pinterest LinkedIn Tumblr


ಮೈಸೂರು: ಆರ್ಥಿಕ ವಲಯದ ಮೇಲೆ ಕೊರೋನಾ ಕರಿನೆರಳು ಹೆಚ್ಚುತ್ತಲೇ ಇದ್ದು, ಮೈಸೂರಿನಲ್ಲಿ ಸದರನ್ ಸ್ಟಾರ್ ಹೋಟೆಲ್ ನಂತರ ಇದೀಗ ರೀಡ್ ಆ್ಯಂಡ್ ಟೇಲರ್ ಕಾರ್ಖಾನೆ ಬಾಗಿಲು ಮುಚ್ಚಿದೆ.

ದೇಶದಲ್ಲೇ ಪ್ರತಿಷ್ಠಿತ ಸೂಟ್‌ ತಯಾರಿಕಾ ಕಂಪನಿಯಾಗಿ 2000ನೇ ದಶಕದಲ್ಲಿ ಬ್ರಾಂಡೆಡ್‌ ಸೂಟ್‌ ಆಗಿದ್ದ ರೀಡ್‌ ಆ್ಯಂಡ್‌ ಟೇಲರ್‌ ಸಂಸ್ಥೆಗೆ ಬಾಲಿವುಟ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರೇ ರಾಯಭಾರಿಯಾಗಿದ್ದರು. ಆದರೆ ಕೊರೋನಾ ಸಂಕಷ್ಟದಿಂದ ಎರಡು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಕಾರ್ಖಾನೆಗೆ, ಇದ್ದ ಅಲ್ಪಸ್ವಲ್ಪ ಬೇಡಿಕೆಯೂ ಕುಸಿದುಬಿದ್ದಿದ್ದು, ಅಂತಿಮವಾಗಿ ಮೈಸೂರಿನ ಬೃಹತ್‌ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರ ಮಾಡಿದೆ.

ಲಾಕ್‌ಡೌನ್ ಸಂಕಷ್ಟದಿಂದ ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಮೈಸೂರು ಜಿಲ್ಲೆಯ ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿದ್ದ ರೀಡ್ ಆ್ಯಂಡ್ ಟೇಲರ್ ಬಟ್ಟೆ ಕಾರ್ಖಾನೆ ಬಂದ್ ಆಗಿದೆ. ಆ ಮೂಲಕ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 1,400 ಕಾರ್ಮಿಕರ ಬದುಕು ಬೀದಿಪಾಲಾದಂತೆ ಕಾಣುತ್ತಿದೆ.

ಮುಂಬೈ ಮೂಲದ ಉದ್ಯಮಿ ನಿತಿನ್ ಎಸ್.ಕಾಸ್ಲಿವಾಲ್ ಒಡೆತನದ ರೀಡ್‌ ಆ್ಯಂಡ್‌ ಟೇಲರ್ ಕಾರ್ಖಾನೆ 1998ರಲ್ಲಿ ಮೈಸೂರಿನಲ್ಲಿ ಸೂಟ್‌ ತಯಾರಿಕೆಯ ಕಚ್ಚಾ ವಸ್ತು ನಿರ್ಮಾಣದ ಕಾರ್ಖಾನೆ ಆರಂಭಿಸಿತು. ಒಂದು ಕಾಲದಲ್ಲಿ ಈ ಬ್ರಾಂಡ್​ನ ಖ್ಯಾತಿ ಎಷ್ಟಿತ್ತು ಅಂದರೆ ರೇಮಂಡ್ಸ್‌ ಸೂಟ್‌ ಸರಿಸಮನಾದ ಸೂಟ್‌ ನೀಡಿ ಭಾರತದಲ್ಲಿ ಅತ್ಯಂತ ಖ್ಯಾತಿ ಗಳಿಸಿತ್ತು. ಇದರ ಖ್ಯಾತಿಗೆ ಮತ್ತಷ್ಟು ಮೆರಗು ಕೊಟ್ಟಿದ್ದು ಬಾಲಿವುಡ್‌ನ ಖ್ಯಾತ ನಟ ಅಮಿತಾಬ್ ಬಚ್ಚನ್‌. ಹೌದು ಅಮಿತಾಬ್‌ ಈ ರೀಡ್‌ ಆ್ಯಂಡ್ ಟೇಲರ್ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆದ ಮೇಲಂತು ಸೂಟ್‌ ಮಾರಾಟದಲ್ಲಿ ಭಾರೀ ಅಭಿವೃದ್ದಿ ಹೊಂದಿತ್ತು. ಆದರೆ ಕಳೆದ ಎರಡು ಮೂರು ವರ್ಷಗಳಿಂದ ಈ ಕಂಪನಿಯ ಸೂಟ್‌ಗೆ ಬೇಡಿಕೆ ಇರಲಿಲ್ಲ. ಬೇಡಿಕೆ ಕುಸಿತ ಕಂಡ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ 4,500 ಕೋಟಿ ರೂ.ಗೆ ಕಾರ್ಖಾನೆಯನ್ನು ಮಾರಾಟ ಮಾಡುವ ಯತ್ನ ನಡೆದಿತ್ತು. ಆದರೆ ಕಾರ್ಖಾನೆಯನ್ನು ಯಾರೂ ಖರೀದಿಸಲು ಮುಂದೆ ಬಾರದ ಹಿನ್ನೆಲೆಯಲ್ಲಿ ಮಾಲೀಕರು ಕಾನೂನಿನ ಮೊರೆ ಹೋದರು.

ನ್ಯಾಯಾಲಯದ ಆದೇಶದಂತೆ ಕಾರ್ಖಾನೆಗೆ ಲಿಕ್ವಿಡೇಟರ್ ನೇಮಕವಾಗಿತ್ತು( ಅಂದ್ರೆ ಮಾಲೀಕರು ಸಂಸ್ಥೆ ನಡೆಸಲು ಸಾಧ್ಯವಾಗದೆ ಇದ್ದಾಗ ಸಾಧಕ-ಬಾದಕಗಳನ್ನು ಇತ್ಯರ್ಥಗೊಳಿಸುವ ತನಕ ನ್ಯಾಯಾಲಯ ನೇಮಿಸಿದ ಅಧಿಕಾರಿಯಿಂದ ಕಾರ್ಖಾನೆ ನಿರ್ವಹಣೆ ನಡೆಯುತ್ತದೆ. ಕಾರ್ಖಾನೆಗೆ ಬರುವ ಆದಾಯದಲ್ಲೇ ಅವರು ಇಡೀ ಕಾರ್ಖಾನೆ ನಡೆಸಬೇಕಾಗಿರುತ್ತದೆ.) ನ್ಯಾಯಾಲಯ ರವಿಶಂಕರ್ ದೇವರಕೊಂಡ ಎಂಬುವವರನ್ನ ಉಸ್ತುವಾರಿಯಾಗಿ ನೇಮಕ ಮಾಡಿ ಆದೇಶ ಮಾಡಿತ್ತು. ಕಳೆದ ಮೂರು ವರ್ಷಗಳಿಂದ ಕಾರ್ಖಾನೆ ಆರ್ಥಿಕ ಪರಿಸ್ಥಿತಿ ಗಮನಿಸಿ ಸಂಕಷ್ಟಕ್ಕೆ ಈಡಾಗಿದ್ದ ಕಾರ್ಖಾನೆಯನ್ನು ಮುಚ್ಚಲು ಲಿಕ್ವಿಡೇಟರ್ ವರದಿ ನೀಡಿದ್ದರು.

ಆದರೆ, ಕಾರ್ಖಾನೆ ಆಡಳಿತ ಮಂಡಳಿ ತೀರ್ಮಾನದ ವಿರುದ್ಧ ಹೋರಾಟಕ್ಕೆ ನಿಂತ ಕಾರ್ಮಿಕರು ನಮಗೆ ಕೆಲಸ ಉಳಿಸಿ ಎಂದು ನ್ಯಾಯಾಲಯದಲ್ಲಿ ಅರ್ಜಿ ಹಾಕಿ ಮನವಿ ಮಾಡಿದ್ದರು. ಕಳೆದ ಎರಡು ತಿಂಗಳುಗಳಿಂದ ವಾದ- ವಿವಾದ ನಡೆದು, ಅಂತಿಮವಾಗಿ ಮೇ 14ರಂದು ಕಾರ್ಖಾನೆಯ ಮುಚ್ಚುವಂತೆ ಆದೇಶಿಸಿರುವ ನ್ಯಾಯಾಲಯ, ನೌಕರರ ಆರ್ಥಿಕ ಒಪ್ಪಂದಗಳನ್ನು ಮಗಿಸಿದ ನಂತರ ಕಾರ್ಖಾನೆ ಮಚ್ಚಿ ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮೇ 14ರಿಂದಲೇ ರೀಡ್ ಆ್ಯಂಡ್ ಟೇಲರ್‌ ಕಾರ್ಖಾನೆಯು ತನ್ನೆಲ್ಲ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಿದೆ.ಇದನ್ನು ಓದಿ: ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ವಿಡಿಯೋ ಸಂವಾದ; ಪಶ್ಚಿಮಘಟ್ಟವನ್ನು ಸೂಕ್ಷ್ಮ ಪರಿಸರ ಪ್ರದೇಶವೆಂದು ಘೋಷಿಸುವ ಸಂಬಂಧ ಚರ್ಚೆ

ಕೊರೋನಾ ಹೊಡೆತದಿಂದಾಗಿ ಉದ್ಯಮ ಕ್ಷೇತ್ರದಲ್ಲಿ ಒಂದಿಲ್ಲೊಂದು ಕಾರಣಗಳಿಂದ ಕಾರ್ಖಾನೆಗಳು ಮುಚ್ಚುತ್ತಿದ್ದು, ಸಾವಿರಾರು ನೌಕರರ ಬದುಕು ಬೀದಿಪಾಲಾಗುತ್ತಿದೆ. ಮೋದಿ 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿದ್ದರೂ ಉದ್ಯೋಗ ನಷ್ಟದ ಸಮಸ್ಯೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ಈವರೆಗೆ ಆಗಿರುವ ನಷ್ಟವನ್ನು ತುಂಬುವುದಾದರೂ ಹೇಗೆ ಅನ್ನೋದೆ ಈಗ ಮೂಡಿರುವ ಯಕ್ಷ ಪ್ರಶ್ನೆಯಾಗಿದೆ.

Comments are closed.