ಮನೋರಂಜನೆ

ಪತಿಯ ಬಣ್ಣ ಬಯಲು ಮಾಡಲು ಟ್ವಿಟರ್‌ ಖಾತೆ ತೆರೆದ ನವಾಜುದ್ದೀನ್ ಸಿದ್ದಿಕಿ ಪತ್ನಿ!

Pinterest LinkedIn Tumblr


ಹಿಂದಿ ಚಿತ್ರರಂಗದ ಖ್ಯಾತ ನಟ ನವಾಜುದ್ದೀನ್‌ ಸಿದ್ದಿಕಿ ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಕೆಲವೇ ದಿನಗಳ ಹಿಂದೆ ಅವರ ಪತ್ನಿ ಆಲಿಯಾ ಸಿದ್ದಿಕಿ ವಿಚ್ಛೇದನ ಬಯಸಿ ಲೀಗಲ್‌ ನೋಟಿಸ್‌ ಕಳಿಸಿರುವ ವಿಚಾರ ಕೂಡ ಬಹಿರಂಗ ಆಗಿದೆ. ಆ ಬಳಿಕ ನವಾಜುದ್ದೀನ್‌ ಮತ್ತು ಆಲಿಯಾ ನಡುವೆ ಮಾತಿನ ಚಕಮಕಿ ಮುಂದುವರಿದಿದೆ.

ಹೊಸ ಬೆಳವಣಿಗೆ ಏನೆಂದರೆ ಆಲಿಯಾ ಸಿದ್ದಿಕಿ ಈಗ ಟ್ವಿಟರ್‌ಗೆ ಕಾಲಿಟ್ಟಿದ್ದಾರೆ. ಹೊಸ ಖಾತೆ ತೆರೆದಿರುವ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಕೆಲವು ಶಾಕಿಂಗ್‌ ವಿಚಾರಗಳನ್ನು ಬಯಲು ಮಾಡಲಿದ್ದಾರಂತೆ. ಒಂದು ವೇಳೆ ಅವರು ಎಲ್ಲ ಕಹಿ ಸತ್ಯಗಳನ್ನು ಬಾಯಿ ಬಿಟ್ಟರೆ ನವಾಜುದ್ದೀನ್ ವೃತ್ತಿಜೀವನದ ಮೇಲೂ ಅದು ಪರಿಣಾಮ ಬೀರಲಿದೆ.

ಆಲಿಯಾಗೆ ಪರ ಪುರುಷನ ಜೊತೆ ಅನೈತಿಕ ಸಂಬಂಧ ಇತ್ತು ಎಂಬ ವರದಿಗಳು ಕೂಡ ಇತ್ತೀಚೆಗೆ ಕೇಳಿಬಂದಿದ್ದವು. ಆ ಬಗ್ಗೆಯೂ ಟ್ವಿಟರ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ. ‘ನನಗೆ ಯಾವ ಪುರುಷನ ಜೊತೆಗೂ ಸಂಬಂಧ ಇಲ್ಲ. ಸದ್ಯಕ್ಕೆ ಕೇಳಿಬಂದಿರುವ ವರದಿಗಳೆಲ್ಲ ಸುಳ್ಳು. ನನ್ನ ಕೆಲವು ಫೋಟೋಗಳನ್ನು ದುರುಪಯೋಗ ಮಾಡಿಕೊಂಡು ಪ್ರಕರಣದ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ’ ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

10 ವರ್ಷಗಳ ಹಿಂದೆ ನವಾಜುದ್ದೀನ್‌ ಮತ್ತು ಆಲಿಯಾ ಮದುವೆ ಆಗಿದ್ದರು. ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಕೆಲವು ಸಮಯದಿಂದ ಗಂಡ ಹೆಂಡತಿ ನಡುವೆ ವೈಮನಸ್ಸು ಉಂಟಾಗುತ್ತಲೇ ಇತ್ತು. ಅದಕ್ಕೆ ನವಾಜುದ್ದೀನ್ ಸಹೋದರ ಶಮಾಸ್‌ ಕೂಡ ಪ್ರಮುಖ ಕಾರಣ ಎನ್ನಲಾಗಿದೆ. ‘ಅಧಿಕಾರದ ದುರ್ಬಳಕೆಯಿಂದ ಸತ್ಯದ ಬಾಯಿ ಮುಚ್ಚದಿರಲಿ’ ಎಂದು ಆಲಿಯಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಖಾತೆಯ ಅಧಿಕೃತತೆ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.

ಪ್ರಸ್ತುತ ಉತ್ತರ ಪ್ರದೇಶದ ಬುದಾನ ಪಟ್ಟಣಕ್ಕೆ ನವಾಜುದ್ದೀನ್‌ ತೆರಳಿದ್ದಾರೆ. ತಮ್ಮ ಸಂಬಂಧಿಕರ ಜೊತೆ ಈದ್‌ ಆಚರಿಸುವ ಸಲುವಾಗಿ ಮುಂಬೈನಿಂದ ಬುದಾನಗೆ ಅವರು ಇತ್ತೀಚೆಗೆ ಪ್ರಯಾಣ ಬೆಳೆಸಿದ್ದರು. ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಅವರಿಗೆ ಪರೀಕ್ಷೆ ಮಾಡಲಾಗಿದ್ದು ನೆಗೆಟಿವ್‌ ವರದಿ ಬಂದಿದೆ. ಆದರೂ ಲಾಕ್‌ಡೌನ್‌ ನಿಯಮಗಳ ಪ್ರಕಾರ ನವಾಜುದ್ದೀನ್‌ ಮತ್ತು ಅವರ ಕುಟುಂಬದವರನ್ನು ಕ್ವಾರಂಟೈನ್‌ನಲ್ಲಿ ಇರುವಂತೆ ಆದೇಶಿಸಲಾಗಿದೆ.

Comments are closed.