ನಟ ಕಮಲ್ ಹಾಸನ್ ಒಬ್ಬ ಅದ್ಭುತ ನಟ ಅನ್ನೋದರಲ್ಲಿ ಎರಡು ಮಾತಿಲ್ಲ. ಮಾಡಿದ ಬಹುತೇಕ ಸಿನಿಮಾಗಳಲ್ಲಿ ಅವರು ಸಕ್ಸಸ್ ಕಂಡಿದ್ದಾರೆ. ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ, ಅವರ ವೈವಾಹಿಕ ಜೀವನ ಮಾತ್ರ ಅಷ್ಟೇನು ಆಶಾದಾಯಕವಾಗಿಲ್ಲ. ಅಧಿಕೃತವಾಗಿ ನಡೆದ ಎರಡು ಮದುವೆಗಳು ಉಳಿಯಲಿಲ್ಲ. ಅಲ್ಲದೆ, ನಟಿ ಗೌತಮಿ ಅವರೊಂದಿಗೆ ಕಮಲ್ ಇದ್ದರು. ಆದರೆ, ಆ ಸಂಬಂಧವೂ ಉಳಿಯಲಿಲ್ಲ. ಈಗ ಹೊಸದಾಗಿ ಒಂದು ವಿಷಯ ಕೇಳಿಬಂದಿದೆ. ಅದೇನೆಂದರೆ, ಅವರದೇ ಸಿನಿಮಾದಲ್ಲಿ ಅಭಿನಯಿಸಿದ ಒಬ್ಬ ನಟಿಯ ಜೊತೆಗೆ ಕಮಲ್ ಡೇಟಿಂಗ್ ಮಾಡುತ್ತಿದ್ದಾರಂತೆ! ಹಾಗಾದರೆ, ಆ ನಟಿ ಯಾರು? ಅಷ್ಟಕ್ಕೂ ಈ ಗಾಸಿಪ್ ಬಗ್ಗೆ ಆ ನಟಿ ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ.
43ರ ಹರೆಯದ ಇಂಡೋ-ಅಮೆರಿಕನ್ ನಟಿ ಪೂಜಾ ಕುಮಾರ್, ಹುಟ್ಟಿದ್ದು ಅಮೆರಿಕದಲ್ಲಿ. 2000ರಲ್ಲಿ ತೆರೆಕಂಡ ‘ಕಾಧಲ್ ರೋಜಾವೆ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಆನಂತರ ಇಂಗ್ಲಿಷ್ ಸಿನಿಮಾರಂಗದೊಂದಿಗೆ ನಂಟನ್ನು ಬೆಳೆಸಿಕೊಂಡಿದ್ದರು. 2013ರಲ್ಲಿ ತೆರೆಕಂಡ ‘ವಿಶ್ವರೂಪಂ’ ಮೂಲಕ ಮೊದಲ ಬಾರಿಗೆ ಕಮಲ್ ಹಾಸನ್ ಜೊತೆ ಕೆಲಸ ಮಾಡುವ ಅವಕಾಶ ಅವರಿಗೆ ಲಭಿಸಿತು. ಅದರಲ್ಲಿ ಡಾ. ನಿರುಪಮಾ ವಿಶ್ವನಾಥ್ ಪಾತ್ರದ ಮೂಲಕ ಗಮನಸೆಳೆದರು. ನಂತರ ಬಂದ ಕಮಲ್ ಅವರ ಮತ್ತೊಂದು ಚಿತ್ರ ‘ಉತ್ತಮ ವಿಲನ್’ನಲ್ಲೂ ಪೂಜಾ ನಟಿಸಿದ್ದರು. ಅದಕ್ಕೆ ಕನ್ನಡಿಗ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದರು.
2018ರಲ್ಲಿ ‘ವಿಶ್ವರೂಪಂ’ ಪಾರ್ಟ್ 2 ಕೂಡ ರಿಲೀಸ್ ಆಯ್ತು. ಮೊದಲ ಭಾಗದಲ್ಲಿ ನಿಭಾಯಿಸಿದ್ದ ಡಾಕ್ಟರ್ ಪಾತ್ರಕ್ಕೆ ಅವರು ಮತ್ತೆ ಬಣ್ಣ ಹಚ್ಚಿದ್ದರು. ಹೀಗೆ ಮೂರು ಬಾರಿ ಒಟ್ಟಿಗೆ ಕಮಲ್ ತೆರೆಹಂಚಿಕೊಂಡಿದ್ದರಿಂದ ಸಹಜವಾಗಿಯೇ ಪೂಜಾ ಬಗ್ಗೆ ಗಾಸಿಪ್ ಹಬ್ಬಿದೆ. 65ರ ಹರೆಯದ ಕಮಲ್ ಮತ್ತು 43ರ ಹರೆಯದ ಪೂಜಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕೇಳಿಬಂದಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೂಜಾ, ‘ಕಮಲ್ ಸರ್ ಮತ್ತು ಅವರ ಕುಟುಂಬದ ಬಗ್ಗೆ ಬಹಳ ಹಿಂದಿನಿಂದಲೇ ನನಗೆ ತಿಳಿದಿದೆ. ನಾನು ನಟಿಸಲು ಆರಂಭಿಸಿದಾಗಿನಿಂದಲೂ ಅವರ ಬಗ್ಗೆ ತಿಳಿದುಕೊಂಡಿದ್ದೇನೆ. ಕಮಲ್ ಸಹೋದರ, ಅವರ ಮಕ್ಕಳಾದ ಶ್ರುತಿ ಹಾಸನ್, ಅಕ್ಷರಾ ಹಾಸನ್ ಸೇರಿದಂತೆ ಎಲ್ಲರು ನನಗೆ ಗೊತ್ತು. ಹಾಗಾಗಿಯೇ ನಾನು ಅವರ ಕುಟುಂಬದ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತೇನೆ’ ಎಂದು ತಿಳಿಸಿದ್ದಾರೆ. ಆ ಮೂಲಕ ಕಮಲ್ ಕುಟುಂಬದೊಂದಿಗೆ ತಮಗಿರುವ ಬಾಂಧವ್ಯದ ಕುರಿತು ಹೇಳಿಕೊಂಡಿದ್ದಾರೆ. ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ.
ಬಹಳ ಹಿಂದಿನಿಂದಲೂ ಕೇಳಿಬರುತ್ತಿದ್ದ ಈ ಡೇಟಿಂಗ್ ವದಂತಿ, ಈಗ ಜೀವ ಪಡೆಯಲು ಕಾರಣ, ‘ತಲೈವನ್ ಇರುಕ್ಕಿಂಡ್ರನ್’ ಚಿತ್ರ. ಕಮಲ್ ಅವರ ಬಹುನಿರೀಕ್ಷಿತ ಈ ಸಿನಿಮಾದಲ್ಲಿ ಮೂವರು ನಟಿಯರು ಇರಲಿದ್ದು, ಅದರಲ್ಲಿ ಒಬ್ಬರಾಗಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿತ್ತು. ಮತ್ತೆ ಕಮಲ್ ಸಿನಿಮಾದಲ್ಲಿ ಪೂಜಾ ಹೆಸರು ಚಾಲ್ತಿಗೆ ಬಂದಿದ್ದರಿಂದ ಡೇಟಿಂಗ್ ಸುದ್ದಿ ಜೀವ ಪಡೆದುಕೊಂಡಿತ್ತು. ಆದರೆ, ಸದ್ಯಕ್ಕಂತೂ ‘ತಲೈವನ್ ಇರುಕ್ಕಿಂಡ್ರನ್’ ಚಿತ್ರದಲ್ಲಿ ಪೂಜಾ ನಟಿಸುತ್ತಿಲ್ಲವಂತೆ!
Comments are closed.