ಮನೋರಂಜನೆ

ದಾಖಲೆ ಬರೆದ ‘ಜೊತೆ ಜೊತೆಯಲಿ’ ಧಾರಾವಾಹಿ!

Pinterest LinkedIn Tumblr


ನಟ ಅನಿರುದ್ಧ ಹಾಗೂ ನಟಿ ಮೇಘಾ ಶೆಟ್ಟಿ ಕಾಂಬಿನೇಷನ್‌ನ ‘ಜೊತೆ ಜೊತೆಯಲಿ’ ಧಾರಾವಾಹಿ ಕನ್ನಡಿಗರ ಮನೆ ಮಾತಾಗಿದೆ. ವಯಸ್ಸು, ಅಂತಸ್ತು, ಜೀವನ ಶೈಲಿ ಎಲ್ಲದರಲ್ಲೂ ಆಕಾಶ ಭೂಮಿಯಷ್ಟು ಅಂತರ ಇರುವ ಈ ಜೋಡಿಯ ಪ್ರೇಮಕಥೆಯೇ ಈ ಧಾರಾವಾಹಿಯ ಹೂರಣ. ಟಿಆರ್‌ಪಿ ವಿಚಾರದಲ್ಲೂ ದಾಖಲೆ ಬರೆದಿರುವ ಈ ಧಾರಾವಾಹಿಯು ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ‘ಜೊತೆ ಜೊತೆಯಲಿ’ ಇದೀಗ ಮತ್ತೊಂದು ಅದ್ವಿತೀಯ ದಾಖಲೆಯನ್ನು ಬರೆದಿದೆ.

ಹೌದು, ಈ ಧಾರಾವಾಹಿಯ ಶೀ‍ರ್ಷಿಕೆ ಗೀತೆ ಕೇಳುಗರಿಗೆ ಮೋಡಿ ಮಾಡಿತ್ತು. ಹಾಗಾಗಿಯೇ ‘ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು, ಎಲ್ಲ ಎಲ್ಲೆ ಮೀರಿದಾಗಲೂ ಪಯಣ ನಿಲ್ಲದು, ಜರಿವ ಜನರೆದುರು ನಿನ್ನ ನೆರಳಾಗಿ ನಿಲ್ಲುವೆ, ಜಗದ ಕೊನೆ ತಿರುವವರೆಗೆ ಬೆರಳ ನಾ ಹಿಡಿದು ನಡೆಯುವೆ, ಎಂದೂ ನಾನಿರುವೆ ಜೊತೆ ಜೊತೆ ಜೊತೆಯಲಿ..’ ಎಂದು ಶುರುವಾಗುವ ಈ ಗೀತೆಯು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಿಟ್ ಆಗಿತ್ತು. ಸಾವಿರಾರು ಜನ ಈ ಹಾಡಿಗೆ ಟಿಕ್ ಟಾಕ್ ಮಾಡಿದ್ದಾರೆ ಕೂಡ. ಹಾಡು ಜನಪ್ರಿಯಗೊಳ್ಳುತ್ತಿದ್ದಂತೆಯೇ, ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿತ್ತು ಧಾರಾವಾಹಿ ತಂಡ. ಇದೀಗ ಅಲ್ಲಿಯೂ ಈ ಹಾಡು ಭರ್ಜರಿ ಹಿಟ್ ಆಗಿದ್ದು, ಇದುವರೆಗೂ 1 ಕೋಟಿ ಬಾರಿ ವೀಕ್ಷಣೆ ಕಂಡಿದೆ.

ಈ ಹಾಡಿಗೆ ಜಿ.ಎಸ್.ಸುನಾದ್ ಗೌತಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿನಾದ ನಾಯಕ್, ನಿಹಾಲ್ ತಾವ್ರೊ, ರಜತ್ ಹೆಗಡೆ ಹಾಡಿಗೆ ಧ್ವನಿಯಾಗಿದ್ದಾರೆ. ಇದಕ್ಕೆ ಅರ್ಥಗರ್ಭಿತವಾದ ಸಾಹಿತ್ಯ ಬರೆದಿರುವವರು ಹರ್ಷಪ್ರಿಯ ಭದ್ರಾವತಿ. ಈ ಹಾಡನ್ನು ಕೇಳುತ್ತಿದ್ದಂತೆಯೇ, ಧಾರಾವಾಹಿಯ ಆಶಯ ಗೊತ್ತಾಗುತ್ತದೆ. ಧಾರಾವಾಹಿಯೊಂದರ ಶೀರ್ಷಿಕೆ ಗೀತೆ ಈ ಪರಿ ಯಶಸ್ಸು ಕಂಡಿರುವುದು ಇದೇ ಮೊದಲು ಎನ್ನಬಹುದು.

ಈ ಕುರಿತು ಸಂತೋಷ ಹಂಚಿಕೊಳ್ಳುವ ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ‘ಜೊತೆ ಜೊತೆಯಲಿ ಧಾರಾವಾಹಿಯ ಶೀರ್ಷಿಕೆ ಗೀತೆ ಯೂಟ್ಯೂಬ್ ನಲ್ಲಿ ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿರುವುದು ನನಗೆ ಬಹಳ ಸಂತೋಷ ತಂದಿದೆ. ಇದು ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಮಹತ್ತರ ಮೈಲಿಗಲ್ಲಿನ ಸಾಧನೆಯಾಗಿದೆ. ‘ಜೊತೆ ಜೊತೆಯಲಿ’ ಧಾರಾವಾಹಿಯ ಜನಪ್ರಿಯತೆಗೆ ಇದು ಸಾಕ್ಷಿಯಾಗಿದೆ. ಈ ಗೀತೆಯ ಸಂಗೀತ ಸಂಯೋಜನೆ, ಗೀತರಚನೆಗೆ ಸಂದ ಗೌರವವಾಗಿದೆ’ ಎನ್ನುತ್ತಾರೆ. ಅನಿರುದ್ಧ ಮತ್ತು ಮೇಘಾ ಜೊತೆ ವಿಜಯಲಕ್ಷ್ಮಿ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Comments are closed.