ಭಾರತೀಯ ಚಿತ್ರರಂಗದಲ್ಲಿ ಒಂದರಮೇಲೊಂದು ಕಹಿ ಘಟನೆ ನಡೆಯುತ್ತಲೇ ಇದೆ. ಸುಶಾಂತ್ ಸಿಂಗ್ ರಜಪೂತ್, ಇರ್ಫಾನ್ ಖಾನ್, ರಿಷಿ ಕಪೂರ್, ಸರೋಜ್ ಖಾನ್, ಚಿರಂಜೀವಿ ಸರ್ಜಾ ಮುಂತಾದವರ ನಿಧನದ ಬೆನ್ನಲ್ಲೇ ಬಾಲಿವುಡ್‌ನ ಹಿರಿಯ ನಟ ಜಗದೀಪ್ ಸಾವಿನ ಸುದ್ದಿ ಎಲ್ಲರಿಗೂ ಶಾಕ್ ನೀಡಿದೆ.
ಅಮಿತಾಭ್ ಬಚ್ಚನ್ ಅವರ ‘ಶೋಲೆ’ ಸಿನಿಮಾದಲ್ಲಿನ ಸೂರ್ಮಾ ಭೋಪಾಲಿ ಎಂಬ ಪಾತ್ರದ ಮೂಲಕ ನಟ ಜಗದೀಪ್ ಹೆಚ್ಚು ಜನಪ್ರಿಯ ಆಗಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದರು ಎನ್ನಲಾಗಿದೆ. ಜಗದೀಪ್ ಅವರ ಮೂಲ ಹೆಸರು ಸಯ್ಯದ್ ಇಷ್ತಿಯಾಕ್ ಅಹ್ಮದ್ ಜಫ್ರಿ. ಆದರೆ ಚಿತ್ರರಂಗದಲ್ಲಿ ಜಗದೀಪ್ ಎಂಬ ಹೆಸರಿನಿಂದಲೇ ಗುರುತಿಸಿಕೊಂಡಿದ್ದರು. ಜಗದೀಪ್ ಪುತ್ರ ಜಾವೇದ್ ಜಫ್ರಿ ಕೂಡ ಜನಪ್ರಿಯ ನಟ.
ಬಾಲ ನಟನಾಗಿ ಬಣ್ಣದ ಲೋಕಕ್ಕೆ ಬಂದ ಜಗದೀಪ್ ಅವರು ತಮ್ಮ ವೃತ್ತಿಜೀವನದಲ್ಲಿ 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಅವರು ಅಭಿನಯಿಸಿದ ಕೊನೇ ಸಿನಿಮಾ ‘ಗಲಿ ಗಲಿ ಛೋರ್ ಹೈ’. ಅದು 2012ರಲ್ಲಿ ತೆರೆಕಂಡಿತ್ತು. ಆ ಸಿನಿಮಾದಲ್ಲಿ ಅಕ್ಷಯ್ ಖನ್ನಾ, ಶ್ರೀಯಾ ಸರಣ್, ಮುಗ್ಧಾ ಗೋಡ್ಸೆ ಮುಂತಾದವರು ನಟಿಸಿದ್ದರು. ಹೆಚ್ಚಾಗಿ ಕಾಮಿಡಿ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಅವರು ಅಪಾರ ಸಂಖ್ಯೆಯ ಅಭಿಮಾನಿಗಳ ಮನ ಗೆದ್ದಿದ್ದರು.
‘ಶೋಲೆ’ ಸಿನಿಮಾದಲ್ಲಿ ತಾವು ಮಾಡಿದ್ದ ಪಾತ್ರವನ್ನೇ ಆಧಾರವಾಗಿಟ್ಟುಕೊಂಡು 1998ರಲ್ಲಿ ‘ಸೂರ್ಮಾ ಭೋಪಾಲಿ’ ಶೀರ್ಷಿಕೆಯಲ್ಲೇ ಜಗದೀಪ್ ಸಿನಿಮಾ ಮಾಡಿದ್ದರು. ನಿರ್ದೇಶನದ ಜೊತೆಗೆ ಮುಖ್ಯಭೂಮಿಕೆಯನ್ನೂ ಅವರೇ ನಿಭಾಯಿಸಿದ್ದರು. ಅದರಲ್ಲಿ ಸ್ನೇಹಪೂರ್ವಕವಾಗಿ ಅಮಿತಾಭ್ ಬಚ್ಚನ್, ಧರ್ಮೇಂದ್ರ, ರೇಖಾ ಅತಿಥಿ ಪಾತ್ರ ಮಾಡಿದ್ದರು.
ಬಾಲಿವುಡ್‌ನ ಅನೇಕರು ಜಗದೀಪ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ‘ಜಗದೀಪ್ ಅವರ ನಿಧನದ ಸುದ್ದಿ ಕೇಳಿ ಬೇಸರ ಆಯಿತು. ಅವರ ಸಿನಿಮಾಗಳನ್ನು ನೋಡಿ ಯಾವಾಗಲೂ ಎಂಜಾಯ್ ಮಾಡುತ್ತಿದ್ದೆ. ಪ್ರೇಕ್ಷಕರಿಗೆ ಅವರು ಭರಪೂರ ಮನರಂಜನೆ ನೀಡುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ನಟ ಅಜಯ್ ದೇವ್‌ಗನ್ ಟ್ವೀಟ್ ಮಾಡಿದ್ದಾರೆ.
Comments are closed.