ನಟಿ ಸಂಜನಾ ಗಲ್ರಾನಿ ಕನ್ನಡ ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲಿ ಫೇಮಸ್ ಆಗಿದ್ದರೆ, ಅವರ ಸಹೋದರಿ ನಿಕ್ಕಿ ಗಲ್ರಾನಿ ತಮಿಳು-ಮಲಯಾಳಂನಲ್ಲಿ ಸಖತ್ ಬೇಡಿಕೆ ಇರುವ ನಟಿ. ಸಿನಿಮಾ ವಿಚಾರದಲ್ಲಿ ಸಖತ್ ಬ್ಯುಸಿ ಇರುವ ನಿಕ್ಕಿ, ಬೇರೆ ವಿಚಾರಗಳಿಗೆ ಸುದ್ದಿಯಾಗಿರುವುದು ತೀರಾ ಕಮ್ಮಿ. ಇದೀಗ ಅವರು ಡೆಟಿಂಗ್ ವಿಚಾರಕ್ಕೆ ಸಖತ್ ಸುದ್ದಿಯಾಗುತ್ತಿದ್ದಾರೆ. ಬಹುಭಾಷಾ ನಟ ಆದಿ ಪಿನಿಸೆಟ್ಟಿ ಜೊತೆ ನಿಕ್ಕಿ ಹೆಸರು ತಳುಕು ಹಾಕಿಕೊಂಡಿದೆ.
ಅಷ್ಟಕ್ಕೂ ಈ ಇಬ್ಬರು ಕಲಾವಿದರ ಕುರಿತು ಇಂಥದ್ದೊಂದು ಸುದ್ದಿ ಹಬ್ಬಿದ್ದು ಹೇಗೆ? ನಿಕ್ಕಿ ಮತ್ತು ಆದಿ 2015ರಲ್ಲಿ ಒಟ್ಟಿಗೆ ‘ಯಾಗವರಾಯಿನುಮ್ ನಾ ಕಾಕ್ಕಾ’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ತಮಿಳು-ತೆಲುಗಿನಲ್ಲಿ ತೆರೆಕಂಡಿತ್ತು. ನಂತರ ‘ಮರಗಧ ನಾನಯಮ್’ ಸಿನಿಮಾದಲ್ಲಿ ಇನ್ನೊಮ್ಮೆ ಇಬ್ಬರು ಒಟ್ಟಿಗೆ ನಟಿಸಿದ್ದರು. ಹಾಗಾಗಿ, ಇಬ್ಬರ ನಡುವೆ ಒಳ್ಳೆಯ ಸ್ನೇಹವಿತ್ತು. ಆಗಾಗ ಗಾಸಿಪ್ ಕಾಲಂಗಳಲ್ಲಿ ಅವರ ಹೆಸರು ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ ಈ ವಿಚಾರ ಸದ್ದು ಮಾಡುವುದಕ್ಕೆ ಕಾರಣ, ಆದಿ ಅವರ ತಂದೆ ಜನ್ಮದಿನ ಆಚರಣೆ!
ಆದಿ ತಂದೆ ರವಿ ರಾಜ ಪಿನಿಸೆಟ್ಟಿ ತೆಲುಗು ಚಿತ್ರರಂಗದಲ್ಲಿ ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅವರ ಜನ್ಮದಿನವಿತ್ತು. ಆ ಸಲುವಾಗಿ ಸಣ್ಣದಾಗಿ ಬರ್ತ್‌ಡೇ ಸೆಲೆಬ್ರೇಷನ್ ಇತ್ತು. ಕುಟುಂಬದವರಷ್ಟೇ ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ನಟಿ ನಿಕ್ಕಿ ಕೂಡ ಭಾಗಿಯಾಗಿದ್ದಾರೆ. ಆದಿ ಕುಟುಂಬದ ಜೊತೆಗೆ ನಿಕ್ಕಿ ಇರುವ ಫೋಟೋಗಳು ಈಗ ವೈರಲ್ ಆಗಿವೆ. ಮೂಲಗಳ ಪ್ರಕಾರ, ಅವರಿಬ್ಬರು ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧಾರ ಮಾಡಿದ್ದಾರಂತೆ. ಆದರೆ, ಈ ಬಗ್ಗೆ ಆದಿಯಾಗಲಿ, ನಿಕ್ಕಿಯಾಗಲಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಇನ್ನು, ತಮಿಳು, ಮಲಯಾಳಂ ಭಾಷೆಯ ಚಿತ್ರರಂಗದಲ್ಲಿ ಸಖತ್ ಬ್ಯುಸಿ ಇರುವ ನಿಕ್ಕಿ, ಕಳೆದ ಏಳು ವರ್ಷಗಳಲ್ಲಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅತ್ತ ಆದಿ ಕೂಡ ಕೀರ್ತಿ ಸುರೇಶ್ ಜೊತೆ ‘ಗುಡ್ ಲಕ್ ಸಖಿ’, ‘ಕ್ಲ್ಯಾಪ್’ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಅಂದಹಾಗೆ, ರಾಮ್ ಚರಣ್ ತೇಜ ಜೊತೆ ನಟಿಸಿದ್ದ ‘ರಂಗಸ್ಥಲಂ’ ಸಿನಿಮಾ ಆದಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.
Comments are closed.