ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ಪೊಲೀಸ್ ನೋಟಿಸ್ ಕೊಟ್ಟಿದ್ದು, ಗುರುವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಸ್ಯಾಂಡಲ್ವುಡ್ನ ಹಲವರು ನಟ-ನಟಿಯರು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಸ್ಫೋಟಗೊಂಡಿತ್ತು. ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಆರೋಪದ ಮೇರೇಗೆ ನಟಿ ರಾಗಿಣಿ ಆಪ್ತ, ಜಯನಗರದ ಆರ್ಟಿಒ ಕಚೇರಿಯ ದ್ವೀತಿಯ ದರ್ಜೆ ಸಹಾಯಕ ರವಿಶಂಕರ್ನನ್ನು ಬುಧವಾರ ವಶಕ್ಕೆ ಪಡೆದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಡಿಸಿಪಿ ಕೆ.ಪಿ. ರವಿಕುಮಾರ್ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪಬ್, ಪಂಚತಾರ ಹೋಟೆಲ್ ಮತ್ತು ಹೊರವಲಯದ ರೆಸಾರ್ಟ್ಗಳಲ್ಲಿ ನಡೆದಿರುವ ಪಾರ್ಟಿಗಳಲ್ಲಿ ರವಿಶಂಕರ್ ಮತ್ತು ರಾಗಿಣಿ ಕಾಣಿಸಿಕೊಂಡಿದ್ದರು. ಈ ಔತಣ ಕೂಟಗಳಲ್ಲಿ ಡ್ರಗ್ಸ್ ಸೇವನೆ ನಡೆದಿರಬಹುದು ಎಂದು ಸಿಸಿಬಿ ಶಂಕೆ ವ್ಯಕ್ತಪಡಿಸಿದೆ. ಈ ಅನುಮಾನದ ಮೇಲೆ ರವಿಶಂಕರ್ನನ್ನು ಬುಧವಾರ ಬೆಳಗ್ಗೆ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ ಸಿಸಿಬಿ, ಆತನ ಹೇಳಿಕೆ ಆಧರಿಸಿ ರಾಗಿಣಿಗೆ ನೋಟಿಸ್ ಜಾರಿಗೊಳಿಸಿದೆ.
ಕೆಲ ತಿಂಗಳ ಹಿಂದೆ ಅಶೋಕನಗರ ಸಮೀಪದ ಹೋಟೆಲ್ನಲ್ಲಿ ರಾಗಿಣಿ ಜತೆ ಸ್ನೇಹದ ವಿಚಾರವಾಗಿ ರವಿಶಂಕರ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಶಿವಪ್ರಕಾಶ್ ಗಲಾಟೆ ಮಾಡಿಕೊಂಡಿದ್ದರು. ಈಗ ಡ್ರಗ್ಸ್ ಜಾಲದಲ್ಲಿ ರಾಗಿಣಿ ಹಾಗೂ ರವಿಶಂಕರ್ ಹೆಸರು ಕೇಳಿ ಬಂದಿದೆ.
ಸಿಸಿಬಿ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ನಟ-ನಟಿಯರಿಗೂ ಕಂಟಕ ಕಾದಿದೆ. ಇವರ ಜೊತೆಗೆ ಸಂಪರ್ಕ ಹೋದಿರುವ ರಾಜಕೀಯ, ಗಣ್ಯರ ಮತ್ತು ಉದ್ಯಮಿ ಮಕ್ಕಳಿಗೂ ಡ್ರಗ್ಸ್ ಮತ್ತಿನ ಕಂಟಕ ತಪ್ಪಿದಲ್ಲ. ನಟಿ ಮತ್ತು ಆಕೆ ಆಪ್ತ ಕೊಡುವ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮತ್ತಷ್ಟು ಮಂದಿಯನ್ನು ವಿಚಾರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Comments are closed.