ಮನೋರಂಜನೆ

ಬಿಗ್‍ಬಾಸ್ ಈ ಬಾರಿ ಪ್ರಸಾರವಾಗಲ್ಲ ! ಅತಿ ದೊಡ್ಡ ರಿಯಾಲಿಟಿ ಶೋಗೆ ಕಂಟಕವಾಯಿತು ಕೊರೋನಾ

Pinterest LinkedIn Tumblr

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಭಾರಿ ಸುದ್ದಿ ಮಾಡುತ್ತಿದ್ದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್ ಈ ಬಾರಿ ಪ್ರಸಾರವಾಗಲ್ಲ. ಖಚಿತ ಮಾಹಿತಿಯ ಪ್ರಕಾರ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಬಿಗ್‍ಬಾಸ್ ಆರಂಭವಾಗಲ್ಲ ಎಂದು ಹೇಳಲಾಗುತ್ತಿದೆ.

ಈಗಾಗಲೇ ತೆಲುಗಿನಲ್ಲಿ ಬಿಗ್‍ಬಾಸ್ ಸೀಸನ್ 4 ಆರಂಭವಾಗಿದೆ. ಹಿಂದಿಯಲ್ಲಿ ಹೊಸ ಆವೃತ್ತಿಗೆ ಎಲ್ಲ ತಯಾರಿ ನಡೆಯುತ್ತಿದ್ದು, ಅಕ್ಟೋಬರ್‌ನಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಆದರೆ ಕನ್ನಡದಲ್ಲಿ ಈ ವರ್ಷ ಅಂದರೆ 2020ರಲ್ಲಿ ಬಿಗ್‍ಬಾಸ್ ನಡೆಯುವುದಿಲ್ಲ ಎಂಬ ಸುದ್ದಿ ಪ್ರಕಟವಾಗಿದೆ.

ಖಾಸಗಿ ವಾಹಿನಿಯಲ್ಲಿ ಪ್ರತಿವರ್ಷ ಸೆಪ್ಟೆಂಬರ್ ತಿಂಗಳಿನಿಂದ ಬಿಗ್‍ಬಾಸ್ ಆರಂಭವಾಗುತ್ತಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳಲ್ಲಿ ಬಿಗ್‍ಬಾಸ್ ಸೀಸನ್ 8 ಆರಂಭವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಶೋ ಶುರು ಮಾಡಲು ಸಾಧ್ಯವಾಗಿಲ್ಲ.

ಮಾಹಿತಿ ಪ್ರಕಾರ, ಇನ್ನು ಆರು ತಿಂಗಳು ತಡವಾಗಿ ಬಿಗ್‍ಬಾಸ್ ಶುರುವಾಗಲಿದೆ ಎನ್ನಲಾಗುತ್ತಿದೆ. ಅಂದರೆ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಬಿಗ್‍ಬಾಸ್ ಸೀಸನ್ 8 ಶುರುವಾಗಲಿದೆ. ಹೀಗಾಗಿ ಸದ್ಯಕ್ಕೆ 2020ರಲ್ಲಿ ಬಿಗ್‍ಬಾಸ್ ಶೋ ಪ್ರಸಾರವಾಗಲ್ಲ. ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದ ಬಿಗ್‍ಬಾಸ್ ಶೋ ತುಂಬಾ ಜನಮನ್ನಣೆ ಗಳಿಸಿತ್ತು. ಆದರೆ ಈಗ ಬಿಗ್‍ಬಾಸ್ ಪ್ರಿಯರಿಗೆ ಇದರಿಂದ ಬೇಸರವಾಗುವ ಸಾಧ್ಯತೆಯಿದೆ.

ಸದ್ಯದ ಸಿನಿಮಾ ಶೂಟಿಂಗ್, ಧಾರಾವಾಹಿ ಚಿತ್ರೀಕರಣ, ರಿಯಾಲಿಟಿ ಶೋ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ. ಹಾಗಾಗಿ ಬಿಗ್‍ಬಾಸ್ ಸಹ ಆರಂಭವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ವರ್ಷ ಬಿಗ್‍ಬಾಸ್ ನಡೆಯಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಇತ್ತ ಬಿಗ್ ಬಾಸ್ ಶೋ ನಿರೂಪಣೆ ಮಾಡುತ್ತಿದ್ದ ಕಿಚ್ಚ ಸುದೀಪ್ ಸಹ ಸಿನಿಮಾ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಹೈದರಾಬಾದ್‍ನಲ್ಲಿ ‘ಫ್ಯಾಂಟಮ್’ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಮತ್ತೊಂದೆಡೆ ‘ಕೋಟಿಗೊಬ್ಬ 3’ ಸಿನಿಮಾ ಕೂಡ ರಿಲೀಸ್‍ಗೆ ರೆಡಿಯಾಗಿದೆ.

‘ಬಿಗ್‍ಬಾಸ್ ಸೀಸನ್ 7’ರಲ್ಲಿ ನಟ ಶೈನ್ ಶೆಟ್ಟಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಬಿಗ್‍ಬಾಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಹಾಸ್ಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಬಿಗ್‍ಬಾಸ್ ಸೀಸನ್ 7 ರಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್‍ಬಾಸ್ ವೇದಿಕೆಯಲ್ಲಿ ನಟ ಕಿಚ್ಚ ಸುದೀಪ್ ತಮ್ಮ ಎಡಗಡೆ ನಿಂತಿದ್ದ ಶೈನ್ ಶೆಟ್ಟಿ ಕೈಯನ್ನು ಎತ್ತಿ ವಿಜೇತರೆಂದರು ಘೋಷಿಸಿದ್ದರು.

113 ದಿನಗಳನ್ನು ಕಳೆದಿದ್ದ ವಿನ್ನರ್ ಶೈನ್ ಶೆಟ್ಟಿ ಅವರಿಗೆ ನಿಗದಿಪಡಿಸಿದ್ದ 50 ಲಕ್ಷ ರೂ. ಬಹುಮಾನ ಸಿಕ್ಕಿತ್ತು. ಜೊತೆಗೆ ಅಧಿಕವಾಗಿ 11 ಲಕ್ಷ ಸಿಕ್ಕಿತ್ತು. ಹೀಗಾಗಿ ಒಟ್ಟಾಗಿ ಶೈನ್ ಶೆಟ್ಟಿ ಜೇಬಿಗೆ 61 ಲಕ್ಷ ರೂ. ಸೇರಿತ್ತು. ಅಲ್ಲದೇ 61 ಲಕ್ಷ ಹಣದ ಜೊತೆಗೆ ‘ಬಾಸ್‍ಬಾಸ್ ಸೀಸನ್ 7’ ವಿನ್ನರ್ ಪಟ್ಟ ದೊರೆತಿತ್ತು. ಇದಲ್ಲದೇ ಹೊಸ ಮಾಡೆಲ್ ಟಾಟಾ ಆಲ್ಟ್ರೋಜ್ ಕಾರನ್ನು ವಿನ್ನರ್ ಆದ ಶೈನ್ ಶೆಟ್ಟಿಗೆ ನೀಡಲಾಗಿತ್ತು.

Comments are closed.