ಮುಂಬೈ: ಕಳೆದ ಜೂನ್ 14ರಂದು ತಮ್ಮ ಮುಂಬೈಯ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಯಾವ ರೀತಿ ಸಾಗುತ್ತಿದೆ ಎಂದು ವಿವರಿಸಲು ಮುಂಬೈ ಮಹಾ ನಗರ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ನಿನ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದರು.
ಈ ಪ್ರಕರಣ ಇಂದು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಸುಶಾಂತ್ ಕುಟುಂಬಸ್ಥರು ಪಾಟ್ನಾದಲ್ಲಿ ಪ್ರಕರಣ ದಾಖಲಿಸಿರುವುದರಿಂದ ಮುಂಬೈ ಮತ್ತು ಬಿಹಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಎಂ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ಪೊಲೀಸ್ ಆಯುಕ್ತರು ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ನಂತರ ಇಬ್ಬರೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು ಎಂಬ ಮಾಹಿತಿ ಸಿಕ್ಕಿದೆ.
ಬಿಜೆಪಿ ಸೇರಿದಂತೆ ಹಲವರು ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯಿಸುತ್ತಿರುವ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್, ಮಹಾರಾಷ್ಟ್ರ ಪೊಲೀಸರು ಪ್ರಕರಣದ ವಿಚಾರಣೆಯನ್ನು ಸರಿಯಾಗಿ ನಡೆಸುತ್ತಿದ್ದು ಸತ್ಯವನ್ನು ಹೊರಹಾಕಲು ಸರ್ವರೀತಿಯಿಂದಲೂ ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
Comments are closed.