ಮನೋರಂಜನೆ

ನನ್ನ ಹೆಂಡತಿಯನ್ನು ಮಂತ್ರವಾದಿ ಅಪಹರಿಸಿದ್ದಾನೆ: ಗೀತ ರಚನೆಕಾರ, ಸಾಹಿತಿ ಕೆ. ಕಲ್ಯಾಣ್

Pinterest LinkedIn Tumblr


ಬೆಳಗಾವಿ: ನನ್ನ ಹೆಂಡತಿ, ಅತ್ತೆ ಮತ್ತು ಮಾವನನ್ನು ಮಂತ್ರವಾದಿಯೊಬ್ಬ ಕಿಡ್ನಾಪ್ ಮಾಡಿ, ಆಸ್ತಿ ಕಬಳಿಸಿದ್ದಾನೆ ಎಂದು ಗೀತ ರಚನೆಕಾರ, ಸಾಹಿತಿ ಕೆ. ಕಲ್ಯಾಣ್ ಆರೋಪಿಸಿದ್ದಾರೆ.

ಈ ಕುರಿತು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳ ಗ್ರಾಮದ ಶಿವಾನಂದ ವಾಲಿ ಎಂಬ ಮಂತ್ರವಾದಿಯು ನನ್ನ ಪತ್ನಿ, ಅತ್ತೆ ಮತ್ತು ಮಾವನನ್ನು ವಶದಲ್ಲಿಟ್ಟುಕೊಂಡು ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾನೆ. ಲಕ್ಷಾಂತರ ರೂ. ನಗದು ದೋಚಿದ್ದಾನೆ ಎಂದು ಸೆ. 30ರಂದು ನೀಡಿರುವ ದೂರಿನಲ್ಲಿ ಕಲ್ಯಾಣ್ ಹೇಳಿದ್ದಾರೆ.

ದೂರಿನ ಮೇರೆಗೆ ಪೊಲೀಸರು ಮಂತ್ರವಾದಿ ಶಿವಾನಂದ ವಾಲಿಯನ್ನು ಶನಿವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಲ್ಯಾಣ್ ಪತ್ನಿ ಅಶ್ವಿನಿ ಅವರನ್ನೂ ಠಾಣೆಗೆ ಕರೆತಂದು ಮಾಹಿತಿ ಪಡೆದಿದ್ದಾರೆ. ‘ನಮ್ಮನ್ನು ಯಾರೂ ಅಪಹರಣ ಮಾಡಿಲ್ಲ. ದಾಂಪತ್ಯ ಕಲಹ ಹಿನ್ನೆಲೆಯಲ್ಲಿ ಜೂನ್ 26ರಂದು ಬೆಳಗಾವಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಹೀಗಾಗಿ ಕಲ್ಯಾಣ್ ದಾರಿ ತಪ್ಪಿಸಲು ಸುಳ್ಳು ದೂರು ನೀಡಿದ್ದಾರೆ’ ಎಂದು ಅಶ್ವಿನಿ ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಳಮಾರುತಿ ಠಾಣೆ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ್, ‘‘ಸಾಹಿತಿ ಕೆ. ಕಲ್ಯಾಣ್ ಅವರು ಸೆ. 30ರಂದು ನೀಡಿದ್ದ ದೂರಿನ ಆಧಾರದ ಮೇಲೆ ಬೆಳಗಾವಿಯ ಗೋಕಾಕ ರಸ್ತೆ ಮಾರ್ಗದ ಅಶೋಕ ನಗರದಲ್ಲಿರುವ ಕೆ.ಕಲ್ಯಾಣ ಅವರ ಪತ್ನಿ ಅಶ್ವಿನಿ ಮತ್ತು ಶಿವಾನಂದ ವಾಲಿ ಅವರನ್ನು ವಿಚಾರಣೆಗೊಳಪಡಿಸಿದ್ದೇವೆ. ಯಾರನ್ನೂ ಬಂಧಿಸಿಲ್ಲ’’ ಎಂದು ತಿಳಿಸಿದ್ದಾರೆ.

Comments are closed.