ಮನೋರಂಜನೆ

ಪ್ರಜಾಪ್ರಭುತ್ವಕ್ಕಿಂತ ಸರ್ವಾಧಿಕಾರವೇ ಉತ್ತಮ: ತೆಲುಗು ನಟ ವಿಜಯ್ ದೇವರಕೊಂಡ

Pinterest LinkedIn Tumblr


ಹೈದರಾಬಾದ್: ಪ್ರಜಾಪ್ರಭುತ್ವಕ್ಕಿಂತ ಸರ್ವಾಧಿಕಾರವೇ ಉತ್ತಮ ಎಂದು ತೆಲುಗು ಖ್ಯಾತ ನಟವಿಜಯ ದೇವರಕೊಂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಟನು ಈ ಹೇಳಿಕೆ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಯುವ ನಟನನ್ನು ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾರ್ವತ್ರಿಕ ಮತ ಚಲಾವಣೆ ಬಗ್ಗೆ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತಮಗೆ ರಾಜಕಾರಣಿಯಾಗುವಷ್ಟು ತಾಳ್ಮೆಯಿಲ್ಲ ಎಂದಿರುವ ಅವರು, ಪ್ರತಿಯೊಬ್ಬರಿಗೂ ಮತ ಚಲಾಯಿಸಲು ಬಿಡಬಾರದು ಎಂದು ಹೇಳಿದ್ದಾರೆ.

ಫಿಲ್ಮ್ ಕಂಪಾನಿಯನ್ ಎಂಬ ಚಾನೆಲ್ ಗೆ ಹಿರಿಯ ಪತ್ರಕರ್ತರಾದ ಭಾರದ್ವಾಜ್ ರಂಗನ್ ಮತ್ತು ಅನುಪಮಾ ಛೋಪ್ರಾ ಅವರ ಜೊತೆ ಮಾತನಾಡಿರುವ ವಿಜಯ್ ದೇವರಕೊಂಡ, ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ಹೇಳುವುದರಲ್ಲಿ ನನಗೆ ನಂಬಿಕೆಯಿಲ್ಲ. ಹಣ ಮತ್ತು ಹೆಂಡಕ್ಕಾಗಿ ತಮ್ಮ ಮತಗಳನ್ನು ಮಾರಾಟ ಮಾಡುವವರು ಮತದಾನದ ಹಕ್ಕನ್ನು ಹೊಂದಿರಬಾರದು, ಅವರಿಗೆ ತಾವು ಏಕೆ ಮತ ಹಾಕುತ್ತಿದ್ದೇವೆ ಎಂದು ಗೊತ್ತಿರುವುದಿಲ್ಲ. ಅದರ ಬದಲು ವಿದ್ಯಾವಂತ ನಾಗರಿಕರು ಮಾತ್ರ ಮತ ಹಾಕಬೇಕು ಎಂದು ಹೇಳಿದ್ದಾರೆ.

ತಮ್ಮ ಪರಿಕಲ್ಪನೆಯನ್ನು ಉದಾಹರಣೆ ಮೂಲಕ ವಿವರಿಸಿ ಹೇಳಿದ ದೇವರಕೊಂಡ, ನೀವು ವಿಮಾನದಲ್ಲಿ ಮುಂಬೈಗೆ ಹೋಗುತ್ತೀರಿ ಎಂದಿಟ್ಟುಕೊಳ್ಳಿ, ಯಾರ್ಯಾರು ವಿಮಾನದಲ್ಲಿ ಹೋಗಬೇಕು ಎಂದು ನೀವು ತೀರ್ಮಾನಿಸುತ್ತೀರಾ? ವಿಮಾನದಲ್ಲಿ ಪ್ರಯಾಣ ಮಾಡುವ 300 ಜನರು ಯಾರು ಅದರಲ್ಲಿ ಹೋಗಬೇಕು, ಯಾರು ಹೋಗಬಾರದು ಎಂದು ತೀರ್ಮಾನಿಸುತ್ತೀರಾ? ಅದನ್ನು ತೀರ್ಮಾನಿಸುವವರು, ವಿಮಾನದಲ್ಲಿ ಯಾವ ದರ್ಜೆಯ ಸೀಟಿನಲ್ಲಿ ಯಾರು ಕುಳಿತುಕೊಳ್ಳಬೇಕು ಎಂದು ವಿಮಾನಯಾನ ಸಂಸ್ಥೆ ನಿರ್ಧರಿಸುತ್ತದೆ.

ಮತದಾನ ಕೇವಲ ಶ್ರೀಮಂತರು ಚಲಾಯಿಸಬೇಕು ಎಂದು ಸಹ ನಾನು ನಂಬುವುದಿಲ್ಲ, ಆದರೆ ಚುನಾಯಿತ ಜನಪ್ರತಿನಿಧಿಗಳನ್ನು ಆರಿಸುವ ಹಕ್ಕು ವಿದ್ಯಾವಂತ ಹಣ ಇರುವ ಮಂದಿಗೆ ಮಾತ್ರ ಸೀಮಿತವಾಗಿರಬೇಕು, ಅವರು ಹಣ, ಹೆಂಡಗಳ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದರು.

ತಮಗೆ ಹಣ, ಹೆಂಡ, ತೋಳ್ಬಲದ ರಾಜಕೀಯದಿಂದ ಸರ್ವಾಧಿಕಾರದ ಮೇಲೆ ನಂಬಿಕೆಯಿದೆ. ಹಣ, ಹೆಂಡದ ಆಮಿಷಕ್ಕೆ ಬಲಿಯಾಗಿ ಮತ ಹಾಕುವ ರಾಜಕೀಯದ ಮೇಲೆ ನನಗೆ ನಂಬಿಕೆಯಿಲ್ಲ, ಅದರ ಬದಲು ಸರ್ವಾಧಿಕಾರವೇ ಉತ್ತಮ. ಆ ಮೂಲಕ ನೀವು ಬದಲಾವಣೆ ತರಬಹುದು ಎಂದಿದ್ದಾರೆ.

ಆದರೆ ವಿಜಯ ದೇವರಕೊಂಡ ಅಭಿಪ್ರಾಯವನ್ನು ಹಲವರು ಒಪ್ಪುತ್ತಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳು, ತತ್ವಗಳು, ಅದರ ಪ್ರಗತಿಯ ಬಗ್ಗೆ ನಟ ವಿಜಯ್ ದೇವರಕೊಂಡ ಅವರಿಗೆ ಸಂಪೂರ್ಣ ಜ್ಞಾನ, ಅರಿವು ಇಲ್ಲ. ಬೇರೆಯವರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ಇವರು ಹೇಗೆ ತೀರ್ಮಾನಿಸುತ್ತಾರೆ ಎಂದು ಕೇಳಿದ್ದಾರೆ.

ರಾಜಕೀಯ-ವಿರೋಧಿ ಜನರು ನಿಧಾನವಾಗಿ ಆರ್ ಡಬ್ಲ್ಯು ಸರ್ವಾಧಿಕಾರವಾದದ ಕಡೆಗೆ ನಿಧಾನವಾಗಿ ಹೇಗೆ ಚಲಿಸುತ್ತಾರೆ ಎಂಬುದಕ್ಕೆ ದೇವರಕೊಂಡ ಸ್ಪಷ್ಟ ಉದಾಹರಣೆ ಎಂದಿದ್ದಾರೆ.

Comments are closed.