ತಿರುವನಂತಪುರಂ: ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್‌ಗೆ ಕೊರೊನಾ ಸೋಂಕು ತಗುಲಿರುವುದು ಧೃಡವಾಗಿದೆ.
ಈ ವಿಚಾರವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಅವರಿಗೆ ಕೊರೊನಾ ತಗುಲಿದೆ. ಸದ್ಯ ಐಸೋಲೇಷನ್‌ಗೆ ಒಳಗಾಗಿರುವ ಅವರು, ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಕೂಡ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
‘ಡಿಜೋ ಜೋಸ್ ಆ್ಯಂಟನಿ ನಿರ್ದೇಶನದ ‘ಜನ ಮನ ಗಣ’ ಸಿನಿಮಾದ ಶೂಟಿಂಗ್ ಅನ್ನು ಅ.7ರಿಂದ ಶುರು ಮಾಡಿದ್ದೆವು. ಸೆಟ್‌ನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಿದ್ದೆವು. ಕಠಿಣ ನಿಯಮಗಳನ್ನು ಹಾಕಿಕೊಂಡಿದ್ದೆವು. ಚಿತ್ರೀಕರಣದ ಕೊನೆಯ ದಿನ ನಾವೊಂದು ಕೋರ್ಟ್ ರೂಮ್ ಸೀನ್ ಅನ್ನು ಶೂಟ್ ಮಾಡಲಾಗಿತ್ತು. ರೂಲ್ಸ್ ಪ್ರಕಾರ, ಶೂಟಿಂಗ್ ಆರಂಭವಾಗುವುದಕ್ಕೂ ಮುನ್ನ ನಾನು ಸೇರಿದಂತೆ ಎಲ್ಲರೂ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದೆವು. ಹಾಗೆಯೇ, ಕೊನೇ ದಿನ ಕೂಡ ಟೆಸ್ಟ್ ಮಾಡಿಸಿಕೊಂಡಿದ್ದೆ. ದುರದೃಷ್ಟವಶಾತ್ ನನಗೀಗ ಕೊರೊನಾ ವೈರಸ್ ಪಾಸಿಟಿವ್ ಆಗಿದೆ. ಸದ್ಯ ನಾನು ಐಸೋಲೇಷನ್‌ನಲ್ಲಿ ಇದ್ದೇನೆ’ ಎಂದು ಪೃಥ್ವಿರಾಜ್ ಸುಕುಮಾರನ್ ಮಾಹಿತಿ ಹಂಚಿಕೊಂಡಿದ್ದಾರೆ.
‘ನನಗೆ ಯಾವುದೇ ರೋಗ ಲಕ್ಷಣಗಳಿಲ್ಲ ಮತ್ತು ನಾನೀಗ ಚೆನ್ನಾಗಿಯೇ ಇದ್ದೇನೆ. ನನ್ನೊಂದಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ಎಲ್ಲರಿಗೂ ಪರೀಕ್ಷೆ ಮಾಡಿಸಿಕೊಳ್ಳಲು ಮತ್ತು ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ಈ ಕೊರೊನಾದಿಂದ ಆದಷ್ಟು ಬೇಗ ಗುಣಮುಖನಾಗಿ ನಾನು ವಾಪಸ್ ಬರಲಿದ್ದೇನೆ ಎಂಬ ನಂಬಿಕೆ ನನಗೆ ಇದೆ. ನಿಮ್ಮೆಲ್ಲ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು’ ಎಂದು ಪೃಥ್ವಿರಾಜ್ ಹೇಳಿಕೊಂಡಿದ್ದಾರೆ.
ಅಂದಹಾಗೆ, ಕಳೆದ ವರ್ಷ ತೆರೆಕಂಡ ‘ಡ್ರೈವಿಂಗ್ ಲೈಸೆನ್ಸ್’ ಮತ್ತು ಈ ವರ್ಷ ತೆರೆಗೆ ಬಂದ ‘ಅಯ್ಯಪ್ಪನುಮ್ ಕೋಶಿಯುಮ್’ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿದ್ದವು. ಕೆಲ ತಿಂಗಳ ಹಿಂದೆ ಅವರು ‘ಆಡುಜೀವಿತಂ’ ಸಿನಿಮಾ ಶೂಟಿಂಗ್‌ಗಾಗಿ ಜೋರ್ಡನ್‌ಗೆ ತೆರಳಿದ್ದರು. ಆದರೆ, ಆ ಸಮಯಕ್ಕೆ ಲಾಕ್‌ಡೌನ್ ಘೋಷಣೆ ಆಗಿದ್ದರಿಂದ, ಅವರು ಅಲ್ಲಿಯೇ ಇದ್ದರು. ಈಚೆಗೆ ಭಾರತಕ್ಕೆ ಮರಳಿದ್ದ ಪೃಥ್ವಿರಾಜ್, ‘ಜನ ಗಣ ಮನ’ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದರು.
Comments are closed.