ಮನೋರಂಜನೆ

ವಿಜಯ್‌ ಸೇತುಪತಿ ನಟನೆಯ ಚಿತ್ರದಿಂದ ಹೊರನಡೆದಿದ್ದಕ್ಕೆ ಕಾರಣ ಹೇಳಿದ ಅದಿತಿ ರಾವ್‌!

Pinterest LinkedIn Tumblr


ಚೆನ್ನೈ: ನಟ ವಿಜಯ್‌ ಸೇತುಪತಿ ನಟನೆಯ ‘ತುಘಲಕ್‌ ದರ್ಬಾರ್‌’ ಸಿನಿಮಾದಿಂದ ಹೊರನಡೆದಿದ್ದಕ್ಕೆ ನಟಿ ಆದಿತಿ ರಾವ್ ಕಾರಣ ಹೇಳಿದ್ದಾರೆ.

ಕಾಲಿವುಡ್‌ನ ಜನಪ್ರಿಯ ನಟ ವಿಜಯ್‌ ಸೇತುಪತಿ ಕೈಯಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳಿವೆ. ಈ ಬಹುಬೇಡಿಕೆಯ ಕಲಾವಿದನ ಜೊತೆ ಅಭಿನಯಿಸಲು ನಟಿಯರು ಕೂಡ ಕಾದಿದ್ದಾರೆ. ಆದರೆ ಇತ್ತೀಚೆಗೆ ವಿಜಯ್‌ ಸುತ್ತ ಹಲವು ವಿವಾದಗಳು ಸೃಷ್ಟಿ ಆಗಿವೆ. ಈ ಸಂದರ್ಭಕ್ಕೆ ಸರಿಯಾಗಿ ಅವರ ಜೊತೆ ನಟಿಸುವುದಿಲ್ಲ ಎಂದು ನಟಿ ಅದಿತಿ ರಾವ್‌ ಹೈದರಿ ಹೇಳಿದ್ದು ಎಲ್ಲರಿಗೂ ಅಚ್ಚರಿ ಉಂಟುಮಾಡಿತ್ತು. ಅಷ್ಟಕ್ಕೂ ಅದಿತಿ ಯಾಕೆ ಹೀಗೆ ಮಾಡಿದರು ಎಂಬುದಕ್ಕೆ ಈಗ ಕಾರಣ ಬಹಿರಂಗ ಆಗಿದೆ.

ವಿಜಯ್‌ ಸೇತುಪತಿ ನಟಿಸಲಿರುವ ‘ತುಘಲಕ್‌ ದರ್ಬಾರ್‌’ ಸಿನಿಮಾಗೆ ಅದಿತಿ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಅವರು ಏಕಾಏಕಿ ಆ ಚಿತ್ರದಿಂದ ಹಿಂದೆ ಸರಿದರು. ಅವರ ಜಾಗಕ್ಕೆ ರಾಶಿ ಖನ್ನಾ ಆಗಮಿಸಿದ್ದಾರೆ. ಹಾಗಂತ ಚಿತ್ರತಂಡದ ಜೊತೆ ಯಾವುದೇ ರೀತಿಯ ವಿವಾದ ಮಾಡಿಕೊಂಡು ಅದಿತಿ ಹೊರ ಹೋಗಿಲ್ಲ. ಅವರಿಂದ ಈ ಸಿನಿಮಾಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಅವರು ಮಾಹಿತಿ ನೀಡಿದ್ದಾರೆ.

‘ಕೊರೊನಾದಿಂದಾಗಿ ಭಾರತೀಯ ಚಿತ್ರರಂಗ ಹಲವು ತಿಂಗಳ ಕಾಲ ಸ್ತಬ್ಧ ಆಗಿತ್ತು. ಈಗತಾನೆ ಸಿನಿಮಾ ಕೆಲಸಗಳು ನಿಧಾನಕ್ಕೆ ಆರಂಭ ಆಗಿವೆ. ಇಂಥ ಸಂದರ್ಭದಲ್ಲಿ ನನ್ನಿಂದಾಗಿ ಯಾರಿಗೂ ತಡ ಆಗಬಾರದು ಎಂಬುದು ನನ್ನ ಕಾಳಜಿ. ಈಗಾಗಲೇ ಶೂಟಿಂಗ್‌ ಆರಂಭಿಸಿರುವ ಸಿನಿಮಾಗಳ ಕೆಲಸ ಮುಗಿಸಬೇಕಿದೆ. ಇನ್ನೂ ಆರಂಭ ಆಗದ ಸಿನಿಮಾಗಳು ನನ್ನ ಸಲುವಾಗಿ ವಿಳಂಬ ಆಗುವುದು ನನಗೆ ಇಷ್ಟವಿಲ್ಲ’ ಎಂದು ಅದಿತಿ ರಾವ್‌ ಹೇಳಿದ್ದಾರೆ. ‘ತುಘಲಕ್‌ ದರ್ಬಾರ್‌’ ತಂಡದ ಜೊತೆ ಈ ವಿಚಾರಗಳನ್ನು ಚರ್ಚಿಸಿದ ಬಳಿಕ ಅವರು ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ.

‘ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಾಪಕ ಲಲಿತ್‌ ಕುಮಾರ್‌, ನಿರ್ದೇಶಕ ದೆಹಲಿ ಪ್ರಸಾದ್‌ ದೀನದಯಾಳ್‌ ಅವರ ಜೊತೆ ಚರ್ಚಿಸಿದ್ದೇನೆ. ಆ ಬಳಿಕವೇ ಚಿತ್ರತಂಡದಿಂದ ಹೊರಬರುವ ನಿರ್ಧಾರ ಮಾಡಿದೆ. ಇಡೀ ತಂಡಕ್ಕೆ ಒಳಿತಾಗಲಿ. ಈಗ ನಾಯಕಿಯಾಗಿ ಆಯ್ಕೆ ಆಗಿರುವ ನಟಿ ರಾಶಿ ಖನ್ನಾ ಅವರಿಗೆ ಆಲ್‌ ದ ಬೆಸ್ಟ್‌. ಪ್ರೀತಿಯ ಅಭಿಮಾನಿಗಳನ್ನು ಶೀಘ್ರದಲ್ಲೇ ಚಿತ್ರಮಂದಿರಲ್ಲಿ ಭೇಟಿ ಆಗುತ್ತೇನೆ’ ಎಂದು ಅದಿತಿ ಬರೆದುಕೊಂಡಿದ್ದಾರೆ. ಆ ಮೂಲಕ ಎಲ್ಲ ಅಂತೆಕಂತೆಗಳಿಗೆ ಅವರು ಪೂರ್ಣವಿರಾಮ ಇಟ್ಟಿದ್ದಾರೆ.

Comments are closed.