ಮನೋರಂಜನೆ

ಹೊಸ ಬಟ್ಟೆಗೆ ಬೇಡಿಕೆ ಇಡುತ್ತಾ ಜೈಲಿನಲ್ಲೇ ದೀಪಾವಳಿ ಆಚರಿಸಿದ ರಾಗಿಣಿ, ಸಂಜನಾ

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ ಹಗರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಈ ಬಾರಿಯ ದೀಪಾವಳಿ ಆಚರಿಸಿದರು.

ಹಬ್ಬಕ್ಕೆ ತಮಗೆ ಹೊಸ ಬಟ್ಟೆ ಬೇಕೆಂದು ಬೇಡಿಕೆಯಿಡುತ್ತಾ ಸಂಜನಾ ಮತ್ತು ರಾಗಿಣಿಗೆ ಅವರ ಮನೆಯವರು ಹೊಸ ಬಟ್ಟೆ ತಂದುಕೊಟ್ಟಿದ್ದರು. ಆ ಬಟ್ಟೆಯನ್ನು ತೊಟ್ಟು, ಜೈಲಿನ ಬೇಕರಿಯಲ್ಲಿ ಸ್ವೀಟ್​ ತಿಂದು ಅವರಿಬ್ಬರೂ ಜೈಲಿನಲ್ಲೇ ಹಬ್ಬ ಆಚರಿಸಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಮಾನ್ಯ ಕೈದಿಗಳಂತೇ ಇರುವ ನಟಿಮಣಿಯರಿಗೆ ಅವರ ಮನೆಯವರು ದೀಪಾವಳಿ ಹಬ್ಬಕ್ಕೆಂದು ಗುರುವಾರ ಕುಟುಂಬಸ್ಥರು ಬಟ್ಟೆ ಕಳುಹಿಸಿದ್ದರು. ಜೈಲಿನ ಪ್ರೋಟೋಕಾಲ್​ನಂತೆ 3 ದಿನಗಳ ಕಾಲ ಆ ಬಟ್ಟೆಯನ್ನು ಪ್ರತ್ಯೇಕವಾಗಿರಿಸಿ, ಸ್ಯಾನಿಟೈಸ್ ಮಾಡಿದ ಬಳಿಕ ರಾಗಿಣಿ ಮತ್ತು ಸಂಜನಾಗೆ ನೀಡಲಾಯಿತು. ಶನಿವಾರ ಆ ಹೊಸ ಬಟ್ಟೆಯನ್ನು ತೊಟ್ಟು, ಅವರಿಬ್ಬರೂ ಹಬ್ಬ ಆಚರಿಸಿದರು. ಮನೆಯಿಂದ ಬಂದಿರುವ ಬಟ್ಟೆಯನ್ನು ಕೊಡುವಂತೆ ಹಠ ಹಿಡಿದಿದ್ದ ಸಂಜನಾ ಮತ್ತು ರಾಗಿಣಿಗೆ ಜೈಲಿನ ನಿಯಮದಂತೆ ಶನಿವಾರ ಕೊಡೋದಾಗಿ ಹೇಳಿದ್ದ ಜೈಲಾಧಿಕಾರಿಗಳು ಕೊರೋನಾ ಹಿನ್ನೆಲೆಯಲ್ಲಿ ಜೈಲಿನ ನಿಯಮಗಳನ್ನು ಮನವರಿಕೆ ಮಾಡಿಸಿದ್ದರು.

ಶನಿವಾರ ಸಂಜೆ ಜೈಲು ಸಿಬ್ಬಂದಿ ಕೊಟ್ಟ ಬಟ್ಟೆ ತೊಟ್ಟು, ಪೋಷಕರ ಜೊತೆ ಪೋನಿನಲ್ಲಿ ಮಾತನಾಡಲು ಕೂಡ ರಾಗಿಣಿ ಮತ್ತು ಸಂಜನಾಗೆ ಅವಕಾಶ ಕೊಡಲಾಗಿತ್ತು. ಜೈಲಿನ ಸಿಬ್ಬಂದಿಗೆ ಹಾಗೂ ಮಗಳಿಗೆ ಹಬ್ಬಕ್ಕೆ ಸಿಹಿ ಕೊಡುತ್ತೇನೆ ಎಂದಿದ್ದ ರಾಗಿಣಿಯ ತಂದೆಯ ಮನವಿಗೆ ಜೈಲಧಿಕಾರಿ ಒಪ್ಪಿರಲಿಲ್ಲ. ಕೋವಿಡ್-19 ನಿಯಮಾವಳಿ ಪ್ರಕಾರ ಹೊರಗಿನ ತಿಂಡಿಗಳಿಗೆ ಅವಕಾಶವಿಲ್ಲ ಎಂದಿದ್ದ ಕಾರಣ ಜೈಲಿನ ಬೇಕರಿ ತಿನಿಸನ್ನೇ ಖರೀದಿಸಿ ರಾಗಿಣಿ ಮತ್ತು ಸಂಜನಾ ತಿನ್ನಬೇಕಾಯಿತು.

50 ದಿನಗಳಿಂದ ಜೈಲಿನಲ್ಲಿಯೇ ಇದ್ದೇವೆ. ಜೈಲಧಿಕಾರಿಗಳ ಆದೇಶಗಳನ್ನು ಸರಿಯಾಗಿ ಪಾಲಿಸುತ್ತಿದ್ದೇವೆ. ಈಗಲಾದರೂ ನಮ್ಮ ಮನೆಯವರನ್ನು ಭೇಟಿಯಾಗಲು ಅವಕಾಶ ನೀಡಿ. ನಮ್ಮ ಮನೆಯವರು ಕೊಟ್ಟ ಬಟ್ಟೆಯನ್ನಾದರೂ ಹಾಕಿಕೊಳ್ಳಲು ಬಿಡಿ ಎಂದು ಸಂಜನಾ, ರಾಗಿಣಿ ಪಟ್ಟು ಹಿಡಿದಿದ್ದರು. ಹೊಸ ಬಟ್ಟೆ ಮತ್ತು ಸಿಹಿ ತಿಂಡಿಗೆ ಹಠ ಮಾಡಿ ರಾದ್ಧಾಂತ ಎಬ್ಬಿಸಿದ್ದ ನಟಿಯರ ಬೇಡಿಕೆಗೆ ಮಣಿದು, ಅವರ ಹೊಸ ಬಟ್ಟೆಗಳನ್ನು ಕೊಡಲಾಗಿತ್ತು.

Comments are closed.