ಮನೋರಂಜನೆ

ಲಾಕ್​ಡೌನ್​ ನಂತರ ರಿಲೀಸ್​ ಆದ ಮೊದಲ ಸಿನಿಮಾ ಆಕ್ಟ್-1978 ಚಿತ್ರ ವಿಮರ್ಶೆ

Pinterest LinkedIn Tumblr


ಭವಿಷ್ಯದ ಭಾರತದ ಪ್ರಜೆಯನ್ನ ಹೊಟ್ಟೆಯಲ್ಲಿ ಹೊತ್ತ ಹೆಣ್ಣು ಮಗಳೊಬ್ಬಳು ಸರ್ಕಾರಿ ಕಛೇರಿಯಲ್ಲಿ ನಡೆಯುವ ಭ್ರಷ್ಟಾಚಾರ, ದುರಾಚಾರ, ಅನಾಚಾರಗಳನ್ನ ಕೊನೆಗಾಣಿಸುವ ಸಲುವಾಗಿ ಸಿಡಿದೇಳುವ ಕಥೆಯನ್ನು ಆಕ್ಟ್-1978 ಚಿತ್ರ ಒಳಗೊಂಡಿದೆ.

ಯೆಸ್ 1978 ಎಂಬ ಕಾಯಿದೆಯ ಬಗ್ಗೆ ಹೇಳುತ್ತಲೇ ಗೀತಾ ಎಂಬ ಹೆಣ್ಣು ಮಗಳೊಬ್ಬಳ ಮನಕಲಕುವ ಕಥೆಯನ್ನ ತೆರೆಮೇಲೆ ಪ್ರತಿಯೊಬ್ಬರಿಗೂ ಆಪ್ತವಾಗುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮಂಸೋರೆ.

ಸರ್ಕಾರಿ ಕಛೇರಿಯಲ್ಲಿ ಆಗಬೇಕಾದ ಕೆಲಸ ಅರಸಿ ಕಾಲುಗಳು ಲಕ್ಷ ಲಕ್ಷ ಹೆಜ್ಜೆ ಸವೆಸಿದರೂ ಸಹ, ತಮಗೆ ಸಂಬಂಧಿಸಿದ ಫೈಲು ಹೆಜ್ಜೆ ಹೆಜ್ಜೆಗೂ ನಿಂತಾಗ, ಇಂತಹ ವ್ಯವಸ್ಥೆಯ ಐಲು ಬಿಡಿಸಲೇಬೇಕು. ನನಗಾದ ಅವಮಾನ, ಸಂಕಟ, ಸಂಕಷ್ಟ ಇನ್ಯಾರಿಗೂ ಆಗ ಬಾರದು ಅಂತ ದಿಟ್ಟವಾಗಿ ಹೋರಾಡುವ ಪಾತ್ರದಲ್ಲಿ ನಟಿ ಯಜ್ನಾ ಶೆಟ್ಟಿ ಪಾತ್ರವೇ ಆಗಿಹೋಗಿದ್ದಾರೆ.

ಆಗಾಗ ತುಟಿಯಲ್ಲೊಂದು ವ್ಯಂಗದ ನಗೆಯನ್ನ ತರಿಸಿಕೊಳ್ಳುತ್ತಲೇ, ನೋವುಗಳನ್ನ ನುಂಗಿಕೊಂಡು, ಇದಕ್ಕೊಂದು ತಾರ್ಕಿಕ ಅಂತ್ಯ ಸಿಗಲೇಬೇಕು ಎಂಬ ಹೋರಾಟ ಪ್ರತಿಯೊಬ್ಬರ ಹೋರಾಟದಂತೆ ಕಾಣುತ್ತೆ. ಸಿನಿಮಾ ನೋಡುತ್ತಿರುವವರು ಕೂಡ ಅವರಿಗೆ ಸಾಥ್ ಕೊಡಬೇಕು, ಆ ಹೆಣ್ಣು ಮಗಳು ಗೆಲ್ಲಬೇಕು, ನಿಲ್ಲಬೇಕು ಅಂದುಕೊಳ್ಳುತ್ತಾನೆ. ಆ ಮಟ್ಟಿಗೆ ಯಜ್ಞ ಪಾತ್ರ, ಅದನ್ನ ಕಟ್ಟಿಕೊಟ್ಟಿರುವ ನಿರ್ದೇಶಕ‌ ಮಂಸೋರೆ, ಬರಹಗಾರರಾದ ವೀರು ಮಲ್ಲಣ್ಣ, ದಯಾನಂದ್ ಟಿಕೆ ಗೆದ್ದಿದ್ದಾರೆ.

ಮಾತೇ ಆಡದಿದ್ದರೂ, ತಮ್ಮ ನಟನೆಯೇ ಮಾತಾಡುವಂತಹ, ಥಿಯೇಟರ್​ನಿಂದ ಆಚೆ ಹೋದ ನಂತರವೂ ನೆನಪಿನಲ್ಲಿ ಉಳಿಯುವಂತಹ ಪಾತ್ರ ಮಾಡಿದ್ದಾರೆ ಬಿ. ಸುರೇಶ್. ಅವರ ಪಾತ್ರದೊಳಗಿನ ಪರಕಾಯ ಪ್ರವೇಶ ನೋಡಿದರೆ, ಅಯ್ಯೋ ಇಂತಹ ಒಬ್ಬ ಕಲಾವಿದನನ್ನ ಕನ್ನಡ ಚಿತ್ರರಂಗ ಸರಿಯಾಗಿ ಬಳಸಿಕೊಂಡಿಲ್ವಾ? ಅಥವಾ ಬಿ. ಸುರೇಶ್ ನಟನೆಯ‌ ಕಡೆ ಹೆಚ್ಚು ಗಮನ ಕೊಟ್ಟಿಲ್ವಾ? ಬರಹಗಾರ, ನಿರ್ದೇಶಕರಾಗಿಯೇ ಹೆಚ್ಚು ಸಮಯ ಕಳೆದುಬಿಟ್ರಾ ಎಂಬ ನೋವು ಸಹ ಕಾಡುತ್ತೆ.

ಇನ್ನು ಪೊಲೀಸ್ ಆಫೀಸರ್ ಪಾತ್ರದಲ್ಲಿ ಪ್ರಮೋದ್ ಚಕ್ರವರ್ತಿ ಪಾತ್ರಕ್ಕಾಗಿ ಬೇಕಾದ ನ್ಯಾಯ ಒದಗಿಸಿದ್ದಾರೆ. ಮಿಂಚಿನಂತೆ ಬರುವ ಸಂಚಾರಿ ವಿಜಯ್ ಪಾತ್ರಕ್ಕೆ ಅಷ್ಟೇನು ಹೆಚ್ಚು ಸ್ಕ್ರೀನ್ ಸ್ಪೇಸ್ ಇಲ್ಲದಿದ್ದರೂ ಅವರೂ ಸಹ ತಮಗೆ ಸಿಕ್ಕಿರೋ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಸ್ವಚ್ಛಭಾರತ ಅಭಿಯಾನದಂತೆ ಸರ್ಕಾರಿ ಕಛೇರಿಗಳು, ಆಡಳಿತ ಮಾಡುತ್ತಿರುವವರು ಸ್ವಚ್ಛವಾಗೋ ಕೆಲಸ ಆಗಬೇಕು ಅನ್ನೋದನ್ನ ಆಫೀಸ್ ಸ್ವಚ್ಚ ಮಾಡುವವನ ಹತ್ತಿರ ಹೇಳಿಸುವ ಮೂಲಕ ತಾವೆಷ್ಟು ಸೆನ್ಸಿಬಲ್ ಡೈರೆಕ್ಟರ್ ಅನ್ನೋದನ್ನ ಮಂಸೋರೆ ಸಾಭೀತು ಮಾಡಿದ್ದಾರೆ.

ಆಕ್ಟ್ ೧೯೭೮ ಒಂದು ಭಾವನಾತ್ಮಕ ಥ್ರಿಲ್ಲಿಂಗ್ ಜರ್ನಿ. ಪ್ರತಿಯೊಬ್ಬರೂ ಈ ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟ ವ್ಯವಸ್ಥೆ ಕಂಡು ಬೇಸತ್ತಿರುತ್ತಾರೆ.‌ ಅವರೆಲ್ಲರಿಗೂ ಇದು ನಮ್ಮ ‌ಕಥೆ ಎಂದೇ ಅನಿಸುತ್ತದೆ. ಹೀಗಾಗಿ ಆಕ್ಟ್ ೧೯೭೮ ಆ ವರ್ಗ ಈ ವರ್ಗ ಎನ್ನದೇ ಎಲ್ಲಾ ವರ್ಗಕ್ಕೂ ಇಷ್ಟವಾಗುವುದರಲ್ಲಿ ಸಂಶಯನೇ ಇಲ್ಲ.

Comments are closed.