ಚೆನ್ನೈ: ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಿನೆಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದರೂ ನಿಯಮ ಮೀರಿ ಶೂಟಿಂಗ್ ನಡೆಯುತ್ತಿದ್ದ ಬಿಗ್ ಬಾಸ್ ಮಲಯಾಳಂ ಶೂಟಿಂಗ್ ನ್ನು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.
ಮಲಯಾಳಂ ಬಿಗ್ ಬಾಸ್ ಚೆನ್ನೈ ನಗರದ ಹೊರವಲಯ ಚೆಂಬರಂಬಕ್ಕಮ್ ನ ಇವಿಪಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿತ್ತು.
ಸೆಟ್ ನಲ್ಲಿದ್ದ ಕೆಲವು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಕೂಡ ವರದಿಯಾಗಿದೆ. ಇವಿಪಿ ಫಿಲ್ಮ್ ಸಿಟಿಯಲ್ಲಿ ಮಲಯಾಳಂ ಬಿಗ್ ಬಾಸ್ ಚಿತ್ರೀಕರಣ ಫೆಬ್ರವರಿ 7ರಂದು ಆರಂಭವಾಗಿತ್ತು. ಜೂನ್ 6ಕ್ಕೆ ಮುಗಿಯುವುದರಲ್ಲಿತ್ತು. ಫಿಲ್ಮ್ ಸಿಟಿಯ ಒಂದು ಭಾಗವನ್ನು ಬಿಗ್ ಬಾಸ್ ಮಲಯಾಳಂ ಶೂಟಿಂಗ್ ಗೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಫಿಲ್ಮ್ ಸಿಟಿ ಆವರಣದಲ್ಲಿ ಸುಮಾರು 240 ಕಾರ್ಮಿಕರು ಕೆಲಸ ಮಾಡುತ್ತಿದ್ದು ಅವರನ್ನು ಕಂಪೌಂಡ್ ಬಿಟ್ಟು ಹೊರಗೆ ಹೋಗಲು ಬಿಡುತ್ತಿರಲಿಲ್ಲ ಎನ್ನಲಾಗಿದೆ. ಆದರೂ ಮೊನ್ನೆ ಮಂಗಳವಾರ ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಮೂವರು ವಲಸೆ ಕಾರ್ಮಿಕರಿಗೆ ಕೊರೋನಾ ಕಂಡುಬಂದಿತ್ತು. ಆದರೂ ವ್ಯವಸ್ಥಾಪಕ ತಂಡ ಶೂಟಿಂಗ್ ನ್ನು ಮುಂದುವರಿಸಿತ್ತು ಎಂದು ಪೊಲೀಸರು ಹೇಳುತ್ತಾರೆ.
ಈ ಬಗ್ಗೆ ಸುದ್ದಿ ತಿಳಿದ ಕಂದಾಯ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಬಿಗ್ ಬಾಸ್ ಸೆಟ್ ನಲ್ಲಿದ್ದ ಎಲ್ಲಾ ಸ್ಪರ್ಧಿಗಳು, ಕ್ಯಾಮರಾಮೆನ್ ಗಳು, ತಂತ್ರಜ್ಞರು ಮತ್ತು ಇತರ ಸಿಬ್ಬಂದಿಯನ್ನು ಅಲ್ಲಿಂದ ಸ್ಥಳಾಂತರಗೊಳಿಸಿದ್ದಾರೆ. ಆವರಣವನ್ನು ಸದ್ಯಕ್ಕೆ ಬಂದ್ ಮಾಡಿ ಮುಂದಿನ ಆದೇಶದವರೆಗೆ ಸೀಜ್ ಮಾಡಲಾಗಿದೆ.
ತಮಿಳು ನಾಡು ವಿಪತ್ತು ನಿರ್ವಹಣಾ ಕಾಯ್ದೆಯಡಿ ಮಲಯಾಳಂ ಬಿಗ್ ಬಾಸ್ ವ್ಯವಸ್ಥಾಪಕರ ವಿರುದ್ಧ ಕೇಸು ದಾಖಲಿಸಲಾಗಿದೆ.
Comments are closed.