ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದ ಜನಪ್ರಿಯ ನಟ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ. ಇದೀಗ ಈ ಕೂಗಿಗೆ ರಾಕಿಂಗ್ ಸ್ಟಾರ್ ಯಶ್ ಕೂಡ ದನಿಗೂಡಿಸಿದ್ದಾರೆ.
ನಟ ಯಶ್ ಅವರು, ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬ ಅಭಿಯಾನಕ್ಕೆ ಬೆಂಬಲ ಸೂಚಿಸುವ ಮೂಲಕ ಕೈಜೋಡಿಸಿದ್ದಾರೆ. ಈ ಸಂಬಂಧ ಅನಂತ್ ನಾಗ್ ಜೊತೆಗಿರುವ ತಮ್ಮ ಫೋಟೋದೊಂದಿಗೆ ಬರೆದುಕೊಂಡು ಟ್ವೀಟ್ ಮಾಡಿ ನಟನಿಗೆ ಪದ್ಮಪ್ರಶಸ್ತಿ ನೀಡುವಂತೆ ಒತ್ತಾಯಿಸಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ #AnanthNagForPadma ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.
#AnanthnagforPadma #padmaawards #PeoplesPadma@PMOIndia pic.twitter.com/xFS1BToTJd
— Yash (@TheNameIsYash) July 20, 2021
ಟ್ವೀಟ್‍ನಲ್ಲೇನಿದೆ..?
ಅನಂತ್ ನಾಗ್ ಅವರು ಒಂದು ಬಾರಿ ನನಗೆ “ಆಕ್ಟಿಂಗ್ ಈಸ್ ಬಿಹೇವಿಂಗ್” ಅಂತ ಹೇಳಿದ್ದರು. ಅವರು ಹೇಳಿರುವ ಈ ಮಾತು ನನ್ನ ಮನಸ್ಸಲ್ಲಿ ಈಗಲೂ ಇದೆ. ಅನಂತ್ ನಾಗ್ ಅವರ ಸಿನಿಮಾಗಳನ್ನು ನೋಡಿ ನಾನು ಬೆಳೆದವನು. ಸಿನಿಮಾದಲ್ಲಿ ಅವರ ಹಾಸ್ಯಗಳನ್ನು ನೋಡಿ ನಕ್ಕಿದ್ದೇನೆ, ಹಾಗೆಯೇ ಅವರು ಕಣ್ಣೀರು ಹಾಕಿದಾಗ ನಾನು ಅತ್ತಿದ್ದೇನೆ. ಅಲ್ಲದೆ ಅವರು ನಟಿಸಿರುವ ಹಾರರ್ ದೃಶ್ಯಗಳನ್ನು ನೋಡಿ ಭಯಪಟ್ಟಿದ್ದೇನೆ ಕೂಡ. ಅನಂತ್ ನಾಗ್ ಜೊತೆ ತೆರೆ ಹಂಚಿಕೊಳ್ಳಬೇಕು ಎಂಬ ಮಹದಾಸೆ ನನ್ನದಾಗಿತ್ತು.
ಎವರ್‌ಗ್ರೀನ್ ಅನ್ನೋದಕ್ಕೆ ಅವರೇ ಉತ್ತಮ ನಿದರ್ಶನ. ಅವರ ಚಿತ್ರಗಳು, ಅವರ ನಟನೆ ಮತ್ತು ಸೃಜನಶೀಲತೆ ಇಂದಿಗೂ ಪ್ರಸ್ತುತ. ಅವರೊಂದಿಗೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತ್ತು. ಅವರಲ್ಲಿರುವ ಅಪಾರ ಜ್ಞಾನ ನನಗೆ ಪ್ರೇರಣೆಯಾಗಿದೆ. ಅನಂತ್ ನಾಗ್ ಎಂದೆಂದಿಗೂ ಕರ್ನಾಟಕದ ಹೆಮ್ಮೆ. ಅನಂತ್ ನಾಗ್ ಬರೀ ನಟ ಮಾತ್ರ ಅಲ್ಲ. ಭಾರತೀಯ ಚಿತ್ರರಂಗದ ಅಭಿಜ್ಞಾ. ಹೀಗಾಗಿಪದ್ಮ ಪ್ರಶಸ್ತಿಗೆ ಇವರಿಗಿಂತ ಉತ್ತಮರು ಯಾರು? ಎಂದು ಯಶ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ನಟ ಶರಣ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಹಲವು ಮಂದಿ ಅನಂತ್ ನಾಗ್‍ಗೆ ಪದ್ಮ ಪ್ರಶಸ್ತಿ ನೀಡಬೇಕು ಎಂಬ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಇದೀಗ ಇದೇ ಅಭಿಯಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಕೈಜೋಡಿಸಿರುವುದು ಮತ್ತಷ್ಟು ಬಲ ಬಂದಿದೆ.
Comments are closed.