ನವರಸ ನಾಯಕ ಜಗ್ಗೇಶ್ ಸಹೋದರ, ಕನ್ನಡ ನಟ ಕೋಮಲ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ನಟ ಕೋಮಲ್ ವಿರುದ್ಧ ಭ್ರಷ್ಟಾಚಾರದ ಆರೋಪ ಸುತ್ತಿಕೊಂಡಿದೆ. ಸ್ವೆಟರ್ ಹಗರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಹಾಗೂ ನಟ ಕೋಮಲ್ ವಿರುದ್ಧ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಿ.ಎಸ್.ರಘು ಆರೋಪಿಸಿದ್ದಾರೆ. ಈ ಬಗ್ಗೆ ನಟ ಕೋಮಲ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿ.ಎಸ್.ರಘು ಮಾಡಿರುವ ಆರೋಪವೇನು?
”2020-21ನೇ ಸಾಲಿನಲ್ಲಿ ಬಿಬಿಎಂಪಿ ಮಕ್ಕಳಿಗೆ ಸ್ವೆಟರ್‌ಗಳನ್ನು ನೀಡಲು ಅನುದಾನ ಮೀಸಲಿಟ್ಟಿದ್ದು, ಟೆಂಡರ್ ಕರೆಯದೆ 4ಜಿ ವಿನಾಯತಿ ಪಡೆದು ಕರ್ನಾಟಕ ಕೈಮಗ್ಗ ನಿಗಮಕ್ಕೆ ಸ್ವೆಟರ್‌ಗಳನ್ನು ಸರಬರಾಜು ಮಾಡಲು ಆದೇಶ ನೀಡಲಾಗಿತ್ತು. ಕೋವಿಡ್ ಕಾರಣದಿಂದ ಶಾಲೆಗಳು ಮುಚ್ಚಲಾಗಿದ್ದು, ಮಕ್ಕಳಿಗೆ ಸ್ವೆಟರ್ ವಿತರಣೆ ಮಾಡದೆ ಹಣ ಲೂಟಿ ಮಾಡಲಾಗಿದೆ” ಎಂದು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸಿ.ಎಸ್.ರಘು ಆರೋಪ ಮಾಡಿದ್ದಾರೆ.
”ಸ್ವೆಟರ್ ಹಂಚುವ ಟೆಂಡರ್‌ಅನ್ನು ಕೋಮಲ್ ಪಡೆದುಕೊಂಡಿದ್ದರು. ಆರ್.ಅಶೋಕ್ ಹಾಗೂ ಜಗ್ಗೇಶ್ ಒತ್ತಡ ಹಾಕಿಸಿ ಹಣ ಬಿಡುಗಡೆ ಮಾಡಿಸಿದ್ದರು. ಸ್ವೆಟರ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು 1.76 ಕೋಟಿ ರೂಪಾಯಿ ಹಣವನ್ನು ಪಾವತಿ ಮಾಡಲಾಗಿದೆ” ಅಂತಲೂ ಸಿ.ಎಸ್.ರಘು ಆರೋಪಿಸಿದ್ದರು.
ನಟ ಕೋಮಲ್ ಹೇಳುವುದೇನು?
”ಬಿಬಿಎಂಪಿ ಟೆಂಡರ್‌ಗಳನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವುದಿಲ್ಲ. ಈ ಟೆಂಡರ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಟೆಂಡರ್ ಪಡೆದಿಲ್ಲ. ನನ್ನ ಹಾಗೂ ನನ್ನ ಅಣ್ಣನ ಹೆಸರನ್ನು ಇಲ್ಲಿ ಅನವಶ್ಯಕವಾಗಿ ತರಲಾಗುತ್ತಿದೆ. ವಿನಾಕಾರಣ ನನ್ನ ವಿರುದ್ಧ ಆರೋಪ ಮಾಡುತ್ತಿರುವವರ ಮೇಲೆ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ” ಎಂದು ನಟ ಕೋಮಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಿಂಗಳ ಹಿಂದೆ ಟ್ವೀಟ್ ಮಾಡಿದ್ದ ಜಗ್ಗೇಶ್
ನಟ ಕೋಮಲ್ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದಾಗ ನಟ ಜಗ್ಗೇಶ್ ಟ್ವೀಟ್‌ವೊಂದನ್ನು ಮಾಡಿದ್ದರು. ಆ ಟ್ವೀಟ್‌ನಲ್ಲಿ ”ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು ಸ್ವಂತ ವ್ಯವಹಾರ ಬೆಂಗಳೂರಿನ ಕಾರ್ಪೊರೇಷನ್‌ನಲ್ಲಿ ಶುರು ಮಾಡಿ ಯಶಸ್ವಿಯಾದ. ಆದರೆ ಇತ್ತೀಚೆಗೆ ತನಗೆ ಬರಬೇಕಾದ ಬಿಲ್‌ಗೆ ಅಲ್ಲಿನ ಕೆಲ ಲಂಚಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು. ಅದನ್ನು ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೊನಾ ಮಾರಿ ಮೈಸೇರಿ ತುಂಬಾ ಸೀರಿಯಸ್ ಆಗಿಬಿಟ್ಟ” ಎಂದು ಜಗ್ಗೇಶ್ ಉಲ್ಲೇಖಿಸಿದ್ದರು.
Comments are closed.