ಕ್ರೀಡೆ

ಭಾರತದ ಗೆಲುವಿಗೆ ಪ್ರಮುಖವಾಗಿ ಕಾರಣವಾಗಿದ್ದು ಇದೇ ಒಂದು ರನ್ ಔಟ್!

Pinterest LinkedIn Tumblr

ಕಾನ್ಪುರ: ಕಾನ್ಪುರದಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಭಾರತ 6 ರನ್ ಗಳ ರೋಚಕ ಜಯ ಸಾಧಿಸಿದ್ದು, ಭಾರತದ ಗೆಲುವಿಗೆ ಪ್ರಮುಖವಾಗಿ ಕಾರಣವಾಗಿದ್ದು ಮಾತ್ರ ಧೋನಿ ಮತ್ತು ಬುಮ್ರಾರ ಆ ಒಂದು ರನೌಟ್..

ಹೌದು ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ಬೃಹತ್ ಮೊತ್ತ ಪೇರಿಸಿದ್ದ ಹೊರತಾಗಿಯೂ ಸೋಲಿನ ದವಡೆಗೆ ಸಿಲುಕಿತ್ತು. ನ್ಯೂಜಿಲೆಂಡ್ ಇನ್ನಿಂಗ್ಸ್ 49ನೇ ಓವರ್ ನ ವರೆಗೂ ಭಾರತ ಸೋಲುವುದು ಖಚಿತ ಎಂದು ಹೇಳಲಾಗಿತ್ತು. ಆದರೆ ನ್ಯೂಜಿಲೆಂಡ್ ಇನ್ನಿಂಗ್ಸ್ 47ನೇ ಓವರ್ ನಲ್ಲಿ ಧೋನಿ ಮತ್ತು ವೇಗಿ ಬುಮ್ರಾರ ಸಮಯೋಚಿತ ರನೌಟ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿತ್ತು.

ಭಾರತ ನೀಡಿದ್ದ 338 ರನ್ ಗಳ ಬೆನ್ನು ಹತ್ತಿದ್ದ ನ್ಯೂಜಿಲೆಂಡ್ ತಂಡ 47 ಓವರ್ ಗಳ ಹೊತ್ತಿಗೆ ಕೇವಲ 5 ವಿಕೆಟ್ ಕಳೆದುಕೊಂಡು 308 ರನ್ ಗಳನ್ನು ದಾಖಲಿಸಿತ್ತು. ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಸೋಲಿಗೆ ಕಾರಣವಾಗಿದ್ದ ಲಾಥಮ್ ನಿನ್ನೆಯ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು. ಕೇವಲ 50 ಎಸೆತಗಳಲ್ಲಿ ಲಾಥಮ್ 64 ರನ್ ಗಳನ್ನು ಸಿಡಿಸಿ ತಂಡವನ್ನು ಗೆಲುವಿನ ದಡದತ್ತ ಕೊಂಡೊಯ್ಯುತ್ತಿದ್ದರು. ಈ ಹಂತದಲ್ಲಿ 48 ಓವರ್ ನಲ್ಲಿ ಬುಮ್ರಾ ದಾಳಿಗೆ ಮುಂದಾದರು. ಮೊದಲ ನಾಲ್ಕು ಎಸೆತಗಳಲ್ಲಿ ಒಂದು ವೈಡ್ ಸಹಿತ 4 ರನ್ ನೀಡಿದ್ದರು. 4ನೇ ಎಸೆತದಲ್ಲಿ ಬುಮ್ರಾ ಎಲ್ ಬಿಗೆ ಮನವಿ ಮಾಡಿದ್ದರಾದರೂ, ಅಂಪೈರ್ ಔಟ್ ನೀಡಲಿಲ್ಲ.

ಆದರೆ ಮುಂದಿನ ಎಸೆತದಲ್ಲೇ ಭಾರತ ತಂಡ ಕೂಡ ನಿರೀಕ್ಷಿಸದ ಮ್ಯಾಜಿಕ್ ನಡೆದಿತ್ತು. ಬುಮ್ರಾ ಎಸೆದ ಐದನೇ ಎಸೆತವನ್ನು ಗ್ರ್ಯಾಂಡ್ ಹೋಮ್ ರಕ್ಷಣಾತ್ಮಕವಾಗಿ ಆಡಲು ಹೋಗಿ ಮಿಸ್ ಮಾಡಿಕೊಂಡರು. ಚೆಂಡು ವಿಕೆಟ್ ಹಿಂದೆ ಹೋಗುತ್ತಿದ್ದಂತೆಯೇ ಮತ್ತೊಂದು ತುದಿಯಲ್ಲಿ ನಿಂತಿದ್ದ ಲಾಥಮ್ ರನ್ ಕದಿಯಲು ಹೋದರು. ಆದರೆ ಲಾಥಮ್ ಪ್ರಯತ್ನಕ್ಕೆ ಗ್ರ್ಯಾಂಡ್ ಹೋಮ್ ರಿಂದ ಸೂಕ್ತ ಪ್ರತಿಕ್ರಿಯೆ ಲಭಿಸಲಿಲ್ಲ. ಪರಿಣಾಮ ಲಾಥಮ್ ಕ್ರೀಸ್ ಬಿಟ್ಟು ಮುಕ್ಕಾಲು ಭಾಗ ಮುಂದೆ ಬಂದಿದ್ದರು. ಈ ಅವಕಾಶದ ಸದುಪಯೋಗ ಪಡಿಸಿಕೊಂಡ ಮಾಸ್ಟರ್ ಧೋನಿ ಕೂಡಲೇ ಚೆಂಡನ್ನು ಬುಮ್ರಾಗೆ ಎಸೆದರು. ಬುಮ್ರಾ ಕೂಡ ತಡ ಮಾಡದೇ ಚೆಂಡನ್ನು ವಿಕೆಟ್ ಹೊಡೆದರು.

ಅಲ್ಲಿಯವರೆಗೂ ಸಪ್ಪಗಿದ್ದ ಭಾರತ ತಂಡದ ಅಭಿಮಾನಿಗಳು ಏಕಾಏಕಿ ಕುಣಿದು ಕುಪ್ಪಳಿಸಲು ಆರಂಭಿಸಿದರು. ಏಕೆಂದರೆ ಆಗ ರನೌಟ್ ಆಗಿದ್ದು ನ್ಯೂಜಿಲೆಂಡ್ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಲಾಥಮ್..52 ಎಸೆತಗಳಲ್ಲಿ 65 ರನ್ ಗಳಿಸಿದ್ದ ಲಾಥಮ್ ಕಿವೀಸ್ ಪಡೆಯ ಜಯದ ರೂವಾರಿಯಾಗಬೇಕಿತ್ತು. ಅದರೆ ಅನಿರೀಕ್ಷಿತವಾಗಿ ರನೌಟ್ ಗೆ ಬಲಿಯಾದರು. ಅಷ್ಟೂ ಹೊತ್ತು ಕಿವೀಸ್ ಪಾಳಯದಲ್ಲಿದ್ದ ವಿಜಯಲಕ್ಷ್ಮಿ ಲಾಥಮ್ ಔಟ್ ಬಳಿಕ ಭಾರತದತ್ತ ಸ್ಥಳಾಂತರಗೊಂಡಿದ್ದಳು.

ಮುಂದಿನ ಓವರ್ ನಲ್ಲಿ ಸ್ಯಾಂಥನರ್ ಸಿಕ್ಸರ್ ಮೂಲಕ ಕಿವೀಸ್ ಪಡೆಯ ಗೆಲುವಿಗೆ ಪ್ರಯತ್ನಿಸಿದರಾದರೂ, ಭಾರತದ ಶಿಸ್ತುಬದ್ಧ ದಾಳಿ ಮುಂದೆ ಅವರ ಯತ್ನ ಸಫಲವಾಗಲಿಲ್ಲ. 50ನೇ ಓವರ್ ನಲ್ಲಿ ಸ್ಯಾಂಥನರ್ ಕೂಡ ಧವನ್ ಗೆ ಕ್ಯಾಚ್ ನೀಡಿ ಹೊರ ಹೋಗುವುದರೊಂದಿಗೆ ಭಾರತದ ಗೆಲುವು ಸ್ಪಷ್ಟವಾಗಿತ್ತು. ಆ ಮೂಲಕ ಧೋನಿ-ಬುಮ್ರಾ ಅವರ ಒಂದೇ ಒಂದು ರನೌಟ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿ, ಭಾರತಕ್ಕೆ ಪಂದ್ಯದ ಗೆಲುವು ಮಾತ್ರವಲ್ಲದೇ ಸರಣಿ ಜಯಕ್ಕೂ ಕಾರಣವಾಗಿತ್ತು.

Comments are closed.