ಕ್ರೀಡೆ

ಕ್ರಿಕೆಟ್ ಆಟಗಾರರ ಜೊತೆ ಸಂಗಾತಿ ಇರುವ ಪ್ರಸ್ತಾವಕ್ಕೆ ರೆಡ್‌ ಸಿಗ್ನಲ್‌

Pinterest LinkedIn Tumblr


ಕೇಪ್ ಟೌನ್: ಮಹತ್ವದ ಬೆಳವಣಿಗೆಯೊಂದರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಸಂಗಾತಿಯರ ವಿಚಾರಗಳನ್ನು ನೋಡಿಕೊಳ್ಳುವ ವಿಶೇಷ ಅಧಿಕಾರಿಯ ನೇಮಕ ಮಾಡುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಸ್ತಾವಕ್ಕೆ ಕ್ರಿಕೆಟ್ ನಿರ್ವಾಹಕರ ಸಮಿತಿಯು (ಸಿಒಎ) ರೆಡ್ ಸಿಗ್ನಲ್ ತೋರಿಸಿದೆ.

ನಿಮ್ಮ ಮಾಹಿತಿಗಾಗಿ, ಬಿಸಿಸಿಐನಲ್ಲಿ ಹೆಚ್ಚು ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಮೇಲ್ವಿಚಾರಣೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್, ನಿರ್ವಾಹಕರ ಸಮಿತಿಯನ್ನು ನೇಮಕಗೊಳಿಸಿತ್ತು. ಇದೀಗ ಈ ನಿರ್ವಾಹಕರ ಸಮಿತಿಯು ಬಿಸಿಸಿಐ ಪ್ರಸ್ತಾವಕ್ಕೆ ತಡೆಯೊಡ್ಡಿದೆ.

ಮುಂಬಯಿನಲ್ಲಿ ಜನವರಿ 03ರಂದು ನಡೆದ ಮಹತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಬಿಸಿಸಿಐ ನೇಮಕಗೊಳಿಸಿದ ಮಯಾಂಕ್ ಪರೀಕ್ ಜನವರಿ 4ರಂದು ಮುಂಬಯಿನಿಂದ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ ಈಗಾಗಲೇ ಭಾರತೀಯ ಕ್ರಿಕೆಟಿಗರ ನಿರ್ವಹಣೆಯನ್ನು ನೋಡಿಕೊಳ್ಳಲು ರಿಷಿಕೇಶ್ ಉಪಾಧ್ಯಾಯ ತಂಡದ ಜತೆಗಿದ್ದು, ಹಾಗಿರುವಾಗ ಮಗದೊಂದು ಉಸ್ತುವಾರಿ ಅಧಿಕಾರಿಯ ನೇಮಕದ ಅವಶ್ಯಕತೆಯಿಲ್ಲ ಎಂಬುದನ್ನು ಸಿಒಎ ಸ್ಪಷ್ಟಪಡಿಸಿದೆ.

ಇವೆಲ್ಲದರಿಂದ ಸಿಒಎ ಹಾಗೂ ಬಿಸಿಸಿಐ ನಡುವೆ ಭಿನ್ನಮತ್ತಕ್ಕೆ ಕಾರಣವಾಗಿದೆ. ಆದರೆ ಬಿಸಿಸಿಐ ಅಧಿಕಾರಿಗಳು ಈ ಬಗ್ಗೆ ಬಹಿರಂಗವಾಗಿ ಅಸಮಾಧಾನವನ್ನು ತೋಡಿಕೊಂಡಿಲ್ಲ.

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆಗೆ ರೋಹಿತ್ ಶರ್ಮಾ ಪತ್ನಿ ರಿತಿಕಾ, ಭುವನೇಶ್ವರ್ ಕುಮಾರ್ ಪತ್ನಿ ನುಪುರ್, ಮುರಳಿ ವಿಜಯ್ ಪತ್ನಿ ನಿಕಿತಾ, ಅಜಿಂಕ್ಯ ರಹಾನೆ ಪತ್ನಿ ರಾಧಿಕಾ ಹಾಗೂ ವೃದ್ಧಿಮಾನ್ ಸಹಾ ಪತ್ನಿ ರೋಮಿ ತಂಡದ ಜತೆಗಿದ್ದಾರೆ.

ಈ ಎಲ್ಲ ಸಂಗಾತಿಯರಿಗೆ ಎರಡು ವಾರಗಳಷ್ಟು ಕಾಲ ತಮ್ಮ ಪತಿಯರ ಜತೆಗಿರಲು ಅನುಮತಿ ನೀಡಲಾಗಿದೆ. ಪ್ರಸಕ್ತ ಕೇಪ್ ಟೌನ್‌ನಲ್ಲಿ ಸಾಗುತ್ತಿರುವ ಮೊದಲ ಟೆಸ್ಟ್ ಬಳಿಕ ಸಮಯವಕಾಶ ಕೊನೆಗೊಳ್ಳಲಿದೆ.

ಸಂಗಾತಿಯರಿಗಾಗಿ ಅಧಿಕಾರಿಯನ್ನು ನೇಮಕಗೊಳಿಸುವ ತೀರ್ಮಾನವನ್ನು ಬಿಸಿಸಿಐ ವ್ಯವಸ್ಥಾಪಕ ಅಥವಾ ಟೀಮ್ ಇಂಡಿಯಾ ವ್ಯವಸ್ಥಾಪಕರಲ್ಲಿ ಯಾರು ಕೈಗೊಂಡರು ಎಂಬುದು ತಿಳಿದು ಬಂದಿಲ್ಲ. ಭಾರತೀಯ ತಂಡದ ವ್ಯವಸ್ಥಾಪಕ ಸುನಿಲ್ ಸುಬ್ರಮಣಿಯಮ್ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

ಒಂದು ವೇಳೆ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದ್ದಲ್ಲಿ ಕ್ರಿಕೆಟಿಗರ ಸಂಗಾತಿಯರ ಎಲ್ಲ ವೇಳಾಪಟ್ಟಿಯನ್ನು ನೋಡಿಕೊಳ್ಳಬೇಕಾಗುತ್ತದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡದಲ್ಲಿ ಇದು ಸಾಮಾನ್ಯವಾಗಿದೆ. ಆದರೆ ಕ್ರಿಕೆಟ್ ಬಿಟ್ಟು ಬಿಡುವಿನ ವೇಳೆಯಲ್ಲಿ ಪತ್ನಿಯರ ಜತೆ ಹೆಚ್ಚು ಮೋಜು-ಮಸ್ತಿ ಮಾಡುವ ಸಾಧ್ಯತೆ ಇರುವುದರಿಂದ ಇಂತಹದೊಂದು ಪ್ರಸ್ತಾವಕ್ಕೆ ಸಮಿತಿ ಪೂರ್ಣ ವಿರಾಮ ಹಾಕಿದೆ.

Comments are closed.