ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಪಾಕಿಸ್ತಾನ ತಂಡವನ್ನು ಮಣಿಸುವ ಮೂಲಕ ಭಾರತ ತಂಡ ಮತ್ತೆ ಫೈನಲ್ ಪ್ರವೇಶ ಮಾಡಿದೆ.
ಭಾರತ ನೀಡಿದ 273 ರನ್ ಗಳ ಗುರಿಯನ್ನು ಬೆನ್ನಹತ್ತಲು ತಿಣುಕಾಡಿದ ಪಾಕಿಸ್ತಾನ ಕೇವಲ 29.3 ಓವರ್ ಗಳಲ್ಲಿ 69 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಭಾರತ ತಂಡ ಮತ್ತೆ ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶ ಮಾಡಿದೆ. ಭಾರತ ಪ್ರಬಲ ಬೌಲಿಂಗ್ ದಾಳಿ ಎದುರಿಸಲಾಗದೇ ಪಾಕಿಸ್ತಾನ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದು, ಭಾರತದ ಪರ ಇಶಾನ್ ಪೊರೆಲ್ 4 ವಿಕೆಟ್ ಕಬಳಿಸಿ ಪಾಕಿಸ್ತಾನದ ಪತನಕ್ಕೆ ಕಾರಣರಾದರು. ಅಂತೆಯೇ ಶಿವಸಿಂಗ್ ಮತ್ತು ರಿಯಾನ್ ಪರಾಗ್ ತಲಾ 2 ವಿಕೆಟ್ ಮತ್ತು ಅಂತಿಮ ಹಂತದಲ್ಲಿ ಸುಧಾಕರ್ ರಾಯ್ ಮತ್ತು ಅಭಿಷೇಕ್ ಶರ್ಮಾ ತಲಾ 1ವಿಕೆಟ್ ಕಬಳಿಸುವ ಕಬಳಿಸುವ ಮೂಲಕ ಪಾಕಿಸ್ತಾನದ ಸೋಲಿನಲ್ಲಿ ಮಹತ್ತರ ಪಾತ್ರ ವಹಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಕಲೆ ಹಾಕಿತ್ತು. ಆರಂಭಿಕರಾದ ಪೃಥ್ವಿ ಶಾ (41 ರನ್) ಮತ್ತು ಮನೋಜ್ ಕಲ್ರಾ (47 ರನ್) ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಭರ್ಜರಿ ಶತಕ (102 ರನ್)ದ ಇನ್ನಿಂಗ್ಸ್ ಕಟ್ಟಿದ ಶುಭ್ಮನ್ ಗಿಲ್ ಭಾರತ ಸವಾಲಿನ ಗುರಿ ಕಲೆಹಾಕಲು ನೆರವಾದರು. ಅಂತಿಮ ಎಸೆತದವರೆಗೂ ಕ್ರೀಸ್ ನಲ್ಲಿ ಉಳಿಯುವ ಮೂಲಕ ತಮ್ಮ ಜವಾಬ್ದಾರಿಯನ್ನೂ ಅತ್ಯುತ್ತಮವಾಗಿ ನಿರ್ವಹಿಸಿದರು. ಆ ಮೂಲಕ ಭಾರತ 50 ಓವರ್ ಗಳಲ್ಲಿ 272 ರನ್ ಕಲೆ ಹಾಕಿತು.
Comments are closed.