ನವದೆಹಲಿ: ಮಿಲಿಯನ್ ಡಾಲರ್ ಬೇಬಿ ಐಪಿಎಲ್ 2018ಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಸೀಸನ್ 11 ವಿಶಿಷ್ಠ ದಾಖಲೆಯೊಂದಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ತಂಡದ ಚೆಂಡು ವಿರೂಪಗೊಳಿಸಿದ ಪ್ರಕರಣ ಇದೀಗ ಐಪಿಎಲ್ ಸ್ವರೂಪವನ್ನೇ ಬದಲಿಸಿದ್ದು, ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧದ ಭೀತಿ ಎದುರಿಸುತ್ತಿರುವ ಆಸಿಸ್ ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಇನ್ನು ನಿಷೇಧದ ಹಿನ್ನಲೆಯಲ್ಲಿ ಸ್ಮಿತ್ ರಾಜಸ್ತಾನ ರಾಯಲ್ಸ್ ತಂಡದಿಂದ ದೂರಉಳಿಯಲಿದ್ದು, ಇದೇ ಪರಿಸ್ಥಿತಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೂ ಎದುರಾಗಿದೆ.
ಹೀಗಾಗಿ ಈ ಎರಡೂ ತಂಡಗಳಿಗೆ ಪರ್ಯಾಯ ಆಟಗಾರರು ನಾಯಕರಾಗಲಿದ್ದು, ರಾಜಸ್ತಾನ ರಾಯಲ್ಸ್ ತಂಡಕ್ಕೆ ಅಜಿಂಕ್ಯಾ ರಹಾನೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ವಾರ್ನರ್ ಕುರಿತ ಕ್ರಿಕೆಟ್ ಆಸ್ಟ್ರೇಲಿಯಾ ಕೈಗೊಳ್ಳಬಹುದಾದ ನಿರ್ಧಾರಕ್ಕಾಗಿ ಕಾಯುತ್ತಿದೆ. ಒಂದು ವೇಳೆ ವಾರ್ನರ್ ಗೂ ನಿಷೇಧ ಹೇರಿದ್ದೇ ಆದರೆ ಆದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನೂತನ ನಾಯಕನ ಆಯ್ಕೆಯಾಗಲಿದೆ. ಮೂಲಗಳ ಪ್ರಕಾರ ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ಶಿಖರ್ ಧವನ್ ಹೆಸರು ನಾಯಕ ಸ್ಥಾನಕ್ಕೆ ಬಲವಾಗಿ ಕೇಳಿಬರುತ್ತಿದೆ.
ಉಳಿದಂತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ, ಆರ್ ಸಿಬಿಗೆ ವಿರಾಟ್ ಕೊಹ್ಲಿ ನಾಯಕರಾಗಿ ಮುಂದುವರೆಯಲಿದ್ದಾರೆ. ಬದಲಾದ ಪರಿಸ್ಥಿತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಗೌತಮ್ ಗಂಭೀರ್ ನಾಯಕರಾಗಿದ್ದು, ಗಂಭೀರ್ ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡಜದ ನಾಯಕರಾಗಿದ್ದರು. ಗಂಭೀರ್ ಸ್ಥಾನಕ್ಕೆ ತ್ರಿಕೋನ ಟಿ20 ಸರಣಿಯ ಹೀರೋ ದಿನೇಶ್ ಕಾರ್ತಿಕ್ ಆಯ್ಕೆಯಾಗಿದ್ದು, ಸೀಸನ್ 11ನಲ್ಲಿ ಕೋಲ್ಕತಾ ತಂಡವನ್ನು ಕಾರ್ತಿಕ್ ಮುನ್ನಡೆಸಲಿದ್ದಾರೆ.
ಇನ್ನು ಈ ಹಿಂದೆ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ವಾಪಸ್ ಆಗಿದ್ದು, ಚೆನ್ನೈ ತಂಡಕ್ಕೆ ಎಂಎಸ್ ಧೋನಿ ನಾಯಕರಾಗಿ ಮುಂದುವರೆದಿದ್ದಾರೆ. ಇನ್ನು ಈ ಹಿಂದೆ ಚೆನ್ನೈ ತಂಡದಲ್ಲಿದ್ದ ಆರ್ ಅಶ್ವಿನ್, ಇದೀಗ ಕಿಂಗ್ಸ್ ಇಲೆವೆನ್ ತಂಡದ ಪಾಲಾಗಿದ್ದು, ಅಶ್ವಿನ್ ಪಂಜಾಬ್ ತಂಡವನ್ನು ಮುನ್ನಡೆಸಲಿದ್ದಾರೆ.
ಒಟ್ಟಾರೆ ಐಪಿಎಲ್ ಸೀಸನ್ 11 ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ತಂಡಗಳಿಗೂ ಇದೀಗ ಭಾರತೀಯ ಕ್ರಿಕೆಟ್ ಆಟಗಾರರೇ ನಾಯಕರಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.
Comments are closed.