https://youtu.be/st84Y69xFj0
ಸಿಡ್ನಿ: ಚೆಂಡು ವಿರೂಪ ಪ್ರಕರಣದ ಸಂಬಂಧ ಮತ್ತೊಮ್ಮೆ ಸಾರ್ವಜನಿಕವಾಗಿ ಕ್ಷಮೆ ಕೇಳಿರುವ ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಡೇವಿಡ್ ವಾರ್ನರ್, ಕಣ್ಣೀರು ಸುರಿಸುತ್ತಲೇ ಮತ್ತೆಂದೂ ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡುವುದಿಲ್ಲ ಎಂಬ ಕಠಿಣ ನಿರ್ಧಾರ ಪ್ರಕಟಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದ 12 ತಿಂಗಳ ನಿಷೇಧದ ಬಳಿಕವೂ ಆಸ್ಟ್ರೇಲಿಯಾ ತಂಡದಲ್ಲಿ ಕ್ರಿಕೆಟ್ ಆಡದಿರುವ ನಿರ್ಧಾರ ಘೋಷಿಸಿದ್ದಾರೆ. ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಒತ್ತರಿಸಿ ಬಂದ ಕಣ್ಣೀರು ತಡೆಯದೇ ಬರೆದು ತಂದಿದ್ದ ಪ್ರಕಟಣೆಯನ್ನು ಡೇವಿಡ್ ವಾರ್ನರ್ ಓದುತ್ತಾ ತನ್ನದು ಅಕ್ಷಮ್ಯ ಕಾರ್ಯ ಎಂದಿದ್ದಾರೆ.
‘ನನ್ನ ದೇಶಕ್ಕಾಗಿ ಮತ್ತೆ ಆಡುವ ಅವಕಾಶ ಸಿಗುವ ಸಣ್ಣ ಭರವಸೆಯಿತ್ತು. ಆದರೆ, ಅದು ಮತ್ತೆಂದಿಗೂ ಆಗುವುದಿಲ್ಲ…’ ಎಂದು ಹೇಳಿದ್ದಾರೆ.
ಇದೆಲ್ಲ ಹೇಗೆ ನಡೆಯಿತು, ವ್ಯಕ್ತಿಯಾಗಿ ನಾನು ಯಾರು ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಕಂಡುಕೊಳ್ಳುತ್ತೇನೆ. ನನ್ನಲ್ಲಿ ಅಗತ್ಯ ಬದಲಾವಣೆಗಾಗಿ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುತ್ತೇನೆ ಎಂದು ಭರವಸೆಯ ಮಾತನಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ಟೆಸ್ಟ್ ನಡೆಯುತ್ತಿರುವ ವೇಳೆ ನಾನು ಇಲ್ಲಿ ಕುಳಿತಿರುವುದು ಬಹಳ ಬೇಸರ ಸಂಗತಿ ಎಂದು ಅಳವತ್ತುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಿಂದ ಒಂದು ವರ್ಷದ ಅವಧಿಗೆ ನಿಷೇಧ ಹೇರಲಾಗಿದೆ. ತಂಡದ ಆಟಗಾರ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಅವರಿಗೆ ಒಂಬತ್ತು ತಿಂಗಳು ನಿಷೇಧ ಹೇರಲಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮತ್ತು ಐಪಿಎಲ್ ಬಗ್ಗೆ ಬಿಸಿಸಿಐ ಬುಧವಾರ ಈ ಮೂವರು ಆಟಗಾರರ ಶಿಕ್ಷೆಯನ್ನು ಪ್ರಕಟಿಸಿತ್ತು.
Comments are closed.