ಚೆನ್ನೈ: ಏಪ್ರಿಲ್ 10ರಂದು ಚೆನ್ನೈನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಕ್ಕೆ ಸಾಕಷ್ಟು ಬೆದರಿಕೆ ಇದೆ, ಹೀಗಾಗಿ ಯಾವುದೇ ಅಹಿತಕರ ಘಟನೆಯನ್ನು ತಡೆಗಟ್ಟಲು ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿ ಹಾಗೂ ಕಾವೇರಿ ನೀರು ನಿರ್ವಹಣೆ ಸಮಿತಿ ಸ್ಥಾಪನೆ ಮಾಡದೆ ಇರುವ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ತಮಿಳುನಾಡು ರಾಜಕೀಯ ಪಕ್ಷಗಳು ಸಹ ರಾಜ್ಯದಲ್ಲಿ ನಡೆಯುವ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸುವಂತೆ ಕರೆ ನೀಡಿವೆ.
ಏ.10ರ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಎಮ್.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ವಿರುದ್ಧ ಸೆಣೆಸಲಿದೆ. ಈ ಪಂದ್ಯದ ವೇಳೆ ಭದ್ರತೆಗಾಗಿ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಮತ್ತು ಮುನ್ನೆಚ್ಚರಿಕೆಯ ಕ್ರಮವಾಗಿ ಕಪ್ಪು ಬಣ್ಣದ ಉಡುಪು ಧರಿಸಿದ ವ್ಯಕ್ತಿಗಳಿಗೆ ಕ್ರೀಡಾಂಗಣದ ಪ್ರವೇಶಕ್ಕೆ ಅನುಮತಿಸಲಾಗುವುದಿಲ್ಲ ಎಂದು ಪೋಲೀಸರು ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ತಮಿಳುನಾಡು ಮೀನುಗಾರಿಕಾ ಸಚಿವ ಡಿ. ಜಯಕುಮಾರ್ ಐಪಿಎಲ್ ಪಂದ್ಯಕ್ಕೆ ಅಗತ್ಯ ಭದ್ರತೆಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಪಂದ್ಯವನ್ನು ರದ್ದುಪಡಿಸಬೇಕೆ ಅಥವಾ ಬೇಡವೆ ಎನ್ನುವುದನ್ನು ಆಯೋಜಕರು ನಿರ್ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಐಪಿಎಲ್ ಪಂದ್ಯಗಳನ್ನು ಬಹಿಷ್ಕರಿಸಬೇಕೆ ಅಥವಾ ಬೇಡವೆ ಎನ್ನುವುದು ಜನರಿಗೆ ಬಿತ್ಟ ವಿಚಾರ ಎಂದು ಜಯಕಮಾರ್ ಹೇಳಿದರು.
ಏತನ್ಮಧ್ಯೆ, ನಿರ್ದೇಶಕ ಭಾರತಿರಾಜ , ಆರ್.ಕೆ. ಸೆಲ್ವಮಣಿ ಮತ್ತು ವಿ. ಸೇಕರ್ ಸೇರಿ ತಮಿಳು ಚಲನಚಿತ್ರೋದ್ಯಮದ ಒಂದು ಗುಂಪು ’ತಮಿಳ್ ಪಾಂಪಾಟ್ಟು ಪೆರವೈ’ ಎನ್ನುವ ಸಂಗಟನೆಯನ್ನು ರಚಿಸಿದೆ. ಕಾವೇರಿ ನೀರಿಗಾಗಿ ರಾಜ್ಯ ಹೋರಾಟ ನಡೆಸುತ್ತಿರುವಾಗ ಐಪಿಎಲ್ ಪಂದ್ಯವನ್ನು ನಡೆಸುತ್ತಿರುವುದು ಯುವಜನತೆಯಲ್ಲಿ ಬಿರುಕು ಮೂಡಿಸುವ ಯತ್ನ ಎಂದು ಅವರು ಹೇಳಿದ್ದಾರೆ.
ಐಪಿಎಲ್ ಪಂದ್ಯಗಳ ವಿರುದ್ಧ ಅವರು ಪ್ರತಿಭಟನೆ ನಡೆಸಲಿದ್ದಾರೆಂದು ಭಾರತಿರಾಜ ಹೇಳಿದರು.
ಇದಕ್ಕೂ ಮುನ್ನ ಡಿಎಂಕೆ ನಾಯಕ ಸ್ಟ್ಯಾಲಿನ್ ಮಾತನಾಡಿ ಐಪಿಎಲ್ ಪಂದ್ಯಗಳ ಸಂಘಟಕರು ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದರು.”ನಾವು ಐಪಿಎಲ್ ಪಂದ್ಯ ವಿರೋಧಿಯಲ್ಲ ಆದರೆ ಆಯೋಜಕರು ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದಿದ್ದಾರೆ.
ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲವಾನ್ ಸಹ ತಮಿಳುನಾಡಿನಲ್ಲಿ ಐಪಿಎಲ್ ಪಂದ್ಯ ನಿಷೇಧಿಸಬೇಕೆಂದು ಕೋರಿದ್ದರು.
Comments are closed.