ಹೈದರಾಬಾದ್, ಎಪ್ರಿಲ್, 22: ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯೆ ರವಿವಾರ ಸಂಜೆ ನಡೆದ ಐಪಿಎಲ್‌ನ 20ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 4ರನ್‌ಗಳ ರೋಚಕ ಜಯ ಗಳಿಸಿದೆ.
ಹೈದಾರ್‌ಬಾದ್‌ನ ರಾಜೀವ್ ಗಾಂಧಿ ಅಂತರ್‌ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 183 ರನ್ ಗಳಿಸಬೇಕಿದ್ದ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 6ವಿಕೆಟ್ ನಷ್ಟದಲ್ಲಿ 178 ರನ್ ಗಳಿಸಲಷ್ಟೇ ಶಕ್ತವಾಗಿದೆ.
ಹೈದರಾಬಾದ್ ತಂಡದ ಕೇನ್ ವಿಲಿಯಮ್ಸನ್ 84 ರನ್(51ಎ, 5ಬೌ,5ಸಿ), ಯೂಸುಫ್ ಪಠಾಣ್ 45 ರನ್(27ಎ, 1ಬೌ, 4ಸಿ) ಮತ್ತು ಶಾಕೀಬ್ ಅಲ್ ಹಸನ್ 24 ರನ್‌ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ರಶೀದ್ ಖಾನ್ 4 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಗಳಿಸಿದರು. ಆದರೆ ಅವರ ಹೋರಾಟ ಫಲ ನೀಡಲಿಲ್ಲ.ತಂಡ ಗೆಲುವಿನ ದಡ ಸೇರಲಿಲ್ಲ. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 5 ಎಸೆತಗಳಲ್ಲಿ 5 ರನ್ ಗಳಿಸಿದರು. ಇದರಿಂದಾಗಿ ತಂಡದ ಗೆಲುವು ಕೈ ಜಾರಿತು. ಚೆನ್ನೈ ಗೆಲುವಿನ ನಗೆ ಬೀರಿತು.
ದೀಪಕ್ ಚಹಾರ್ 15ಕ್ಕೆ 3 ವಿಕೆಟ್ ಉರುಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ 182/3: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 182 ರನ್ ಗಳಿಸಿತ್ತು.
ಅಂಬಟಿ ರಾಯುಡು ಮತ್ತು ಸುರೇಶ್ ರೈನಾ ಅರ್ಧಶತಕ ದಾಖಲಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.
ರಾಯುಡು 79 ರನ್ (37ಎ, 9ಬೌ,4ಸಿ) ಮತ್ತು ಸುರೇಶ್ ರೈನಾ ಔಟಾಗದೆ 54 ರನ್(43ಎ, 5ಬೌ,2ಸಿ) ಗಳಿಸಿದರು. ಆರಂಭಿಕ ದಾಂಡಿಗರಾದ ಶೇನ್ ವ್ಯಾಟ್ಸನ್(9) ಮತ್ತು ಎಫ್‌ಡು ಪ್ಲೆಸಿಸ್(11) ಅವರು ಬೇಗನೇ ಔಟಾದರು. 7.1 ಓವರ್‌ಗಳಲ್ಲಿ 32ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಚೆನ್ನೈತಂಡಕ್ಕೆ ಆಸರೆ ನೀಡಿದ ರೈನಾ ಮತ್ತು ರಾಯುಡು ಅವರು ಮೂರನೇ ವಿಕೆಟ್‌ಗೆ 122 ರನ್‌ಗಳ ಜೊತೆಯಾಟ ನೀಡಿದರು.
ರಾಯುಡು ಔಟಾದ ಬಳಿಕ ರೈನಾ ಮತ್ತು ನಾಯಕ ಧೋನಿ ಜೊತೆಯಾಗಿ ನಾಲ್ಕನೇ ವಿಕೆಟ್‌ಗೆ 32 ರನ್ ಸೇರಿಸಿದರು. ಇದರಿಂದಾಗಿ ಚೆನ್ನೈ ತಂಡದ ಸ್ಕೋರ್ 182ಕ್ಕೆ ತಲುಪಿತು.
ಧೋನಿ 25 ರನ್(12ಎ, 3ಬೌ, 1ಸಿ ) ಗಳಿಸಿ ಔಟಾಗದೆ ಉಳಿದರು. ಭುವನೇಶ್ವರ ಕುಮಾರ್ ಮತ್ತು ರಶೀದ್ ಖಾನ್ ತಲಾ 1 ವಿಕೆಟ್ ಹಂಚಿಕೊಂಡರು.
_ವಾಭಾ
Comments are closed.