ಬೆಂಗಳೂರು: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ನಾನು ದೊಡ್ಡ ಆಕರ್ಷಣೆ ಮತ್ತು ಶಕ್ತಿಯಾಗಿದ್ದೆ.. ಹೀಗಾಗಿ ಐಪಿಎಲ್ ಹರಾಜು ವೇಳೆ ಅಂತಿಮ ಕ್ಷಣದವರೆಗೂ ನಾನು ಆರ್ ಸಿಬಿ ಪಾಲಾಗುವ ವಿಶ್ವಾಸವಿತ್ತು ಎಂದು ಕ್ರಿಕೆಟಿಗ ಕ್ರಿಸ್ ಗೇಯ್ಲ್ ಹೇಳಿದ್ದಾರೆ.
ಕ್ರಿಕೆಟ್ ವೆಬ್ ಸೈಟ್ ವೊಂದರ ಸಂದರ್ಶನದಲ್ಲಿ ಮಾತನಾಡಿರುವ ಕ್ರಿಸ್ ಗೇಯ್ಲ್, ಐಪಿಎಲ್ ಹರಾಜು ಪ್ರಕ್ರಿಯೆಯ ಕ್ಷಣಗಳನ್ನು ನೆನೆಸಿಕೊಂಡಿದ್ದಾರೆ. ನಾನು ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವ ಕ್ಷಣವೂ ಕೂಡ ಯೋಚಿಸುತ್ತಿರಲಿಲ್ಲ. ಕಾರಣ ನಾನು ಆರ್ ಸಿಬಿ ತಂಡದ ಪ್ರಮುಖ ಆಕರ್ಷಣೆ ಮತ್ತು ದೊಡ್ಡ ಶಕ್ತಿಯಾಗಿದ್ದೆ. ಆರ್ ಸಿಬಿ ಫ್ರಾಂಚೈಸಿಗಳಿಗೆ ನನ್ನ ಸಾಮರ್ಥ್ಯ ಅದಾಗಲೇ ಪರಿಚಯವಿತ್ತು. ಹೀಗಾಗಿ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳುವ ಅಗತ್ಯ ಇರಲಿಲ್ಲ. ಆದಾಗ್ಯೂ ನನ್ನನ್ನು ಆರ್ ಸಿಬಿ ಫ್ರಾಂಚೈಸಿಗಳು ಖರೀದಿ ಮಾಡಲಿಲ್ಲ ಎಂದು ಕ್ರಿಸ್ ಗೇಯ್ಲ್ ತಮ್ಮ ಭಾವನೆ ಹೇಳಿಕೊಂಡಿದ್ದಾರೆ.
ಹಾಲಿ ಐಪಿಎಲ್ ಟೂರ್ನಿಯಲ್ಲಿ ನಾನು ಒಟ್ಟು ನಾಲ್ಕು ಇನ್ನಿಂಗ್ಸ್ ಗಳನ್ನು ಆಡಿದ್ದು, ಈ ಪೈಕಿ ಮೂರು ಇನ್ನಿಂಗ್ಸ್ ಗಳಲ್ಲಿ ಎರಡು ಅರ್ಧಶತಕ, ಒಂದು ಶತಕ ಸಿಡಿಸಿದ್ದೇನೆ. ಹೀಗಾಗಿ ಪ್ರದರ್ಶನ ಕಾರಣದಿಂದಲೇ ನನ್ನನ್ನುತಂಡದಿಂದ ಕೈ ಬಿಡಲಾಗಿದೆ ಎಂದೆನಿಸುತ್ತಿಲ್ಲ. ಒಂದು ವೇಳೆ ಪ್ರದರ್ಶನವೊಂದೇ ಅವರ ಕಾರಣವಾಗಿದ್ದರೆ ಖಂಡಿತಾ ಅವರ ನಿರ್ಧಾರ ತಪ್ಪು. ನನ್ನ ಸಾಮರ್ಥ್ಯವೇನು ಎಂದು ನನ್ನ ಪ್ರದರ್ಶನವೇ ಹೇಳುತ್ತಿದೆ ಎಂದು ಕ್ರಿಸ್ ಗೇಯ್ಲ್ ಹೇಳಿದ್ದಾರೆ.
ಇದೇ ವೇಳೆ ಒಂದು ವೇಳೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ನಿಮ್ಮನ್ನು ಯಾರೂ ಖರೀದಿ ಮಾಡಿರದೇ ಇದ್ದಿದ್ದರೆ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಗೇಯ್ಲ್, ಇಲ್ಲಿಗೇ ನನ್ನ ಜೀವನ ಮುಕ್ತಾಯವಾಗುವುದಿಲ್ಲವಲ್ಲ. ಐಪಿಎಲ್ ಹೊರತಾಗಿಯೂ ಸಾಕಷ್ಟು ಜೀವನವಿದೆ. ತುಂಬಾ ವಿಚಾರಗಳಿವೆ. ಕ್ರಿಕೆಟ್..ಐಪಿಎಲ್ ಹೊರತಾಗಿಯೂ ಜೀವನವಿದೆ. ಹೀಗಾಗಿ ನನಗೇನೂ ಈ ವಿಚಾರ ಹೆಚ್ಚು ಕುತೂಹಲಕಾರಿ ಎನಿಸಲಿಲ್ಲ. ಇನ್ನು ಬಿಪಿಎಲ್ ಮತ್ತು ಸಿಪಿಎಲ್ ಟೂರ್ನಿಗಳಲ್ಲಿ ನನ್ನ ಪ್ರದರ್ಶನ ಉತ್ತಮವಾಗಿಯೇ ಇತ್ತು. ಹೀಗಿದ್ದೂ ನನ್ನ ಖರೀದಿಯಲ್ಲಿನ ನಿರ್ಲಕ್ಷ್ಯ ನನಗೆ ಬೇಸರ ತರಿಸಿದೆ. ಅಂತಿಮ ಕ್ಷಣದಲ್ಲಿ ಪಂಜಾಬ್ ತಂಡ ನನ್ನನ್ನು ಖರೀದಿ ಮಾಡಿದೆ ಎಂದು ಗೇಯ್ಲ್ ಹೇಳಿದ್ದಾರೆ.
ಇದೇ ವೇಳೆ ಪ್ರಸ್ತುತ ಪಂಜಾಬ್ ತಂಡಕ್ಕೆ ಐಪಿಎಲ್ ಚಾಂಪಿಯನ್ ಕಿರೀಟ ನೀಡುವುದು ಮತ್ತು ಮುಂದಿನ ವರ್ಷ ವೆಸ್ಟ್ ಇಂಡೀಸ್ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವುದು ತಮ್ಮ ಮುಂದಿರುವ ಗುರಿಯಾಗಿದೆ ಎಂದು ಗೇಯ್ಲ್ ಹೇಳಿದ್ದಾರೆ.
Comments are closed.