ಕ್ರೀಡೆ

ರೋಚಕ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿದ ಸನ್ ರೈಸರ್ಸ್ ಹೈದರಾಬಾದ್ ! ಅಗ್ರ ಸ್ಥಾನಕ್ಕೇರಿದ ಸನ್ ರೈಸರ್ಸ್ ಹೈದರಾಬಾದ್

Pinterest LinkedIn Tumblr

ಹೈದರಾಬಾದ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟುಗಳ ಅಂತರದ ರೋಚಕ ಗೆಲುವು ದಾಖಲಿಸಿದೆ.

164 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಅಂತಿಮ ಹಂತದಲ್ಲಿ ಯೂಸುಫ್ ಪಠಾಣ್ (27 ರನ್, 12 ಎಸೆತ) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಇನ್ನು ಒಂದು ಎಸೆತ ಮಾತ್ರ ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.

ಈ ಗೆಲುವಿನೊಂದಿಗೆ ಆಡಿರುವ 9 ಪಂದ್ಯಗಳಲ್ಲಿ ಏಳು ಗೆಲುವುಗಳನ್ನು ದಾಖಲಿಸಿರುವ ಹೈದರಾಬಾದ್ ತಂಡವು 14 ಅಂಕಗಳೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿದೆ. ಅತ್ತ 10 ಪಂದ್ಯಗಳಲ್ಲಿ ಆರು ಅಂಕಗಳೊಂದಿಗೆ ಡೆಲ್ಲಿ ಏಳನೇ ಸ್ಥಾನದಲ್ಲಿದೆ.

ಸವಾಲಿನ ಮೊತ್ತ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಅಲೆಕ್ಸ್ ಹೇಲ್ಸ್ ಹಾಗೂ ಶಿಖರ್ ಧವನ್ ಬಿರುಸಿನ ಆರಂಭವೊದಗಿಸಿದರು. ಪ್ರಾರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಅವೇಶ್ ಖಾನ್ ಅವರು ಎಸೆದ ಪಂದ್ಯದ ಆರನೇ ಓವರ್‌ನಲ್ಲಿ 27 ರನ್‌ಗಳನ್ನು ಚಚ್ಚಿದರು. ಇದರೊಂದಿಗೆ ಪವರ್ ಪ್ಲೇನಲ್ಲಿ 61 ರನ್‌ಗಳು ಹರಿದ ಬಂದವು.

ಇಲ್ಲಿಂದ ಬಳಿಕ ರನ್ ಗತಿಗೆ ಆವೇಗವನ್ನು ತುಂಬಿದರು. ಆದರೆ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಹೇಲ್ಸ್ ಅವರನ್ನು ಅಮಿತ್ ಮಿಶ್ರಾ ಕ್ಲೀನ್ ಬೌಲ್ಡ್ ಮಾಡಿ ಡೆಲ್ಲಿಗೆ ಬೇಕಾಗಿರುವ ಅಗತ್ಯ ಬ್ರೇಕ್ ನೀಡಿದರು. 31 ಎಸೆತಗಳನ್ನು ಎದುರಿಸಿದ ಹೇಲ್ಸ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದರು. ಅಲ್ಲದೆ ಧವನ್ ಜತೆಗೆ ಮೊದಲ ವಿಕೆಟ್‌ಗೆ 9 ಓವರ್‌ಗಳಲ್ಲಿ 76 ರನ್‌ಗಳ ಜತೆಯಾಟವನ್ನು ನೀಡಿದರು.

ಅಂತಿಮ 10 ಓವರ್‌ಗಳಲ್ಲಿ ಸೈನ್‌ರೈಸರ್ಸ್ ಗೆಲುವಿಗೆ 82ರನ್‌ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಮತ್ತೆ ಮಾರಕವಾಗಿ ಕಾಡಿದ ಅಮಿತ್ ಮಿಶ್ರಾ, ಅಪಾಯಕಾರಿ ಶಿಖರ್ ಧವನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. 30 ಎಸೆತಗಳನ್ನು ಎದುರಿಸಿದ ಧವನ್ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 33 ರನ್ ಗಳಿಸಿದರು.

ಕರಾರುವಾಕ್ ದಾಳಿ ಸಂಘಟಿಸಿದ ಮಿಶ್ರಾ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 19 ರನ್‌ಗಳನ್ನು ಮಾತ್ರ ಬಿಟ್ಟು ಕೊಟ್ಟು ಪ್ರಮುಖ ಎರಡು ವಿಕೆಟುಗಳನ್ನು ಕಬಳಿಸಿದರು.

ಈ ಹಂತದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಜತೆ ಮನೀಷ್ ಪಾಂಡೆ ಸೇರಿಕೊಂಡರು. ಆದರೆ ನಿಖರ ದಾಳಿ ಸಂಘಟಿಸಿದ ಡೆಲ್ಲಿ ಬೌಲರ್‌ಗಳು ಸನ್‌ರೈಸರ್ಸ್‌ಗೆ ರನ್ ಗತಿಗೆ ಕಡಿವಾಣ ಹಾಕಿದರು. ಇದರಿಂದಾಗಿ ಅಂತಿಮ ಐದು ಓವರ್‌ಗಳಲ್ಲಿ ತಂಡದ ಗೆಲುವಿಗೆ 49 ರನ್‌ಗಳ ಅಗತ್ಯವಿತ್ತು.

ಡೆಲ್ಲಿ ಬೌಲರ್‌ಗಳನ್ನು ಎಚ್ಚರಿಕೆಯಿಂದ ನಿಭಾಯಿಸಿದ ವಿಲಿಯಮ್ಸನ್-ಪಾಂಡೆ ಜೋಡಿಯು ತಂಡವನ್ನು ಗೆಲುವಿನ ಹಾದಿಯತ್ತ ಮುನ್ನಡೆಸಿತು. ಇವರಿಬ್ಬರು ಮೂರನೇ ವಿಕೆಟ್‌ಗೆ 46 ರನ್‌ಗಳ ಮಹತ್ವದ ಜತೆಯಾಟವನ್ನು ನೀಡಿದರು.

ಆದರೆ ನಿರ್ಣಾಯಕ ಹಂತದಲ್ಲಿ ಪಾಂಡೆ ವಿಕೆಟ್ ಕಬಳಿಸಿದ ಡೆಲ್ಲಿ ಪಂದ್ಯದಲ್ಲಿ ತಿರುಗಿ ಬಿತ್ತು. 17 ಎಸೆತಗಳನ್ನು ಎದುರಿಸಿದ ಪಾಂಡೆ ಎರಡು ಬೌಂಡರಿಗಳಿಂದ 21 ರನ್ ಗಳಿಸಿದರು.

ಅಂತಿಮ 2 ಓವರ್‌ಗಳಲ್ಲಿ ಸನ್‌ರೈಸರ್ಸ್ ಗೆಲುವಿಗೆ 28 ರನ್ ಬೇಕಾಗಿತ್ತು. ಆದರೆ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಯೂಸುಫ್ ಪಠಾಣ್ ಕೇವಲ 12 ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 27 ರನ್ ಗಳಿಸಿ ತಂಡವನ್ನು ಗೆಲುವಿನ ಗೆರೆ ದಾಟಿಸಿದರು.

ಅತ್ತ ನಾಯಕನ ಆಟವಾಡಿದ ವಿಲಿಯಮ್ಸನ್ 30 ಎಸೆತಗಳಲ್ಲಿ ಸಿಕ್ಸರ್ ನೆರವಿನಿಂದ 32 ರನ್ ಗಳಿಸಿ ಅಜೇಯರಾಗುಳಿದರು. ಒಟ್ಟಿನಲ್ಲಿ ಕಳಪೆ ಕ್ಷೇತ್ರರಕ್ಷಣೆ, ವಿವಾದತ್ಮಾಕ ಡಿಆರ್‌ಎಸ್ ತೀರ್ಪು ಡೆಲ್ಲಿ ತಂಡಕ್ಕೆ ಮುಳುವಾಯಿತು.

ಈ ಮೊದಲು ಆರಂಭಿಕ ಪೃಥ್ವಿ ಶಾ (65) ಅವರ ಬಿರುಸಿನ ಅರ್ಧಶತಕದ ನೆರವಿನೊಂದಿಗೆ ಡೆಲ್ಲಿ ಡೇರ್‌ಡೆವಿಲ್ಸ್ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 163 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡಕ್ಕೆ ಆರಂಭದಲ್ಲೇ ಗ್ಲೆನ್ ಮ್ಯಾಕ್ಸ್‌ವೆಲ್ (2) ರೂಪದಲ್ಲಿ ಆಘಾತ ಎದುರಾಗಿತ್ತು. ಆದರೆ ದ್ವಿತೀಯ ವಿಕೆಟ್‌ಗೆ ನಾಯಕ ಶ್ರೇಯಸ್ ಅಯ್ಯರ್ ಜತೆ ಸೇರಿದ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಪೃಥ್ವಿ ಶಾ ಡೆಲ್ಲಿಗೆ ಬಿರುಸಿನ ಆರಂಭವೊದಗಿಸಿದರು.

‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಶೈಲಿಯನ್ನು ಹೋಲುವ ಪೃಥ್ವಿ ಶಾ, ಕೆಲವೊಂದು ಆಕರ್ಷಕ ಶಾಟ್‌ಗಳ ಮೂಲಕ ಲಿಟ್ಲ್ ಮಾಸ್ಟರ್ ಬಾಲ್ಯದ ಕಾಲವನ್ನು ನೆನಪಿಸಿದರು. 18ರ ಹರೆಯದಲ್ಲೂ ಓರ್ವ ಅನುಭವಿ ಬ್ಯಾಟ್ಸ್‌ಮನ್‌ರಂತೆ ಬ್ಯಾಟ್ ಬೀಸಿದ ಪೃಥ್ವಿ, ಪ್ರಬಲ ಹೈದರಾಬಾದ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಇದರಿಂದಾಗಿ ಪವರ್ ಪ್ಲೇನಲ್ಲಿ ತಂಡದ ಮೊತ್ತ 60 ರನ್ ತಲುಪಿತು.

ಇಲ್ಲಿಂದ ಬಳಿಕವೂ ಬಿರುಸಿನ ಆಟವಾಡಿದ ಶಾ, ಕೇವಲ 25 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಪೃಥ್ವಿ ವಿಕೆಟ್ ಪಡೆಯುವಲ್ಲಿ ವಿಶ್ವದ ನಂ.1 ಟ್ವೆಂಟಿ-20 ಬೌಲರ್ ರಾಶೀದ್ ಖಾನ್ ಯಶಸ್ವಿಯಾದರು.

ಆಗಲೇ ನಾಯಕ ಶ್ರೇಯಸ್ ಜತೆ ಸೇರಿ 85 ರನ್‌ಗಳ ಜತೆಯಾಟವನ್ನು ನೀಡಿದ್ದರು. 36 ಎಸೆತಗಳನ್ನು ಎದುರಿಸಿದ ಪೃಥ್ವಿ ಆರು ಬೌಂಡರಿ ಹಾಗೂ ಮೂರು ಮನಮೋಹಕ ಸಿಕ್ಸರ್‌ಗಳ ನೆರವಿನಿಂದ 65 ರನ್ ಗಳಿಸಿದರು. ಪೃಥ್ವಿ ವಿಕೆಟ್ ಪತನದ ವೇಳೆ ಡೆಲ್ಲಿ ಸ್ಕೋರ್ 10.1 ಓವರ್‌ಗಳಲ್ಲಿ 95 ರನ್.

ತದಾ ನಂತರ ರಿಷಭ್ ಪಂತ್ ಜತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಿದರು. ಆದರೆ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದ ಅಯ್ಯರ್ ನಿರಾಸೆ ಅನುಭವಿಸಿದರು. 36 ಎಸೆತಗಳನ್ನು ಎದುರಿಸಿದ ಶ್ರೇಯಸ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 44 ರನ್ ಗಳಿಸಿದರು.

ಇನ್ನೊಂದೆಡೆ ಹೈದರಾಬಾದ್ ನಿಖರ ದಾಳಿ ರನ್ ಗತಿ ಏರಿಸಲು ರಿಷಭ್ ಪಂತ್‌ (18) ವಿಫಲವಾದರು. ಅಲ್ಲದೆ 17ನೇ ಓವರ್‌ನಲ್ಲಿ ರಾಶೀದ್ ಖಾನ್ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದರು. ಅದೇ ಓವರ್‌ನಲ್ಲಿ ನಮನ್ ಓಜಾ (1) ಸಹ ರನೌಟ್ ಆಗುವುದರೊಂದಿಗೆ ಅಂತಿಮ ಹಂತದಲ್ಲಿ ರನ್ ಗತಿ ಓರಿಸುವ ಹೋರಾಟಕ್ಕೆ ಹಿನ್ನಡೆಯಾಯಿತು.

ಅಂತಿಮ ಹಂತದಲ್ಲಿ ಕೇವಲ 13 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 23 ರನ್ ಗಳಿಸಿದ ವಿಜಯ್ ಕುಮಾರ್ ತಂಡದ ಮೊತ್ತವನ್ನು 160ರ ಗಡಿ ದಾಟಿಸುವಲ್ಲಿ ನೆರವಾದರು. ಈ ಪೈಕಿ ಭುವಿ ಅವರ ಅಂತಿಮ ಓವರ್‌ನಲ್ಲಿ 17 ರನ್ ಕಬಳಿಸಿದ್ದರು.

ಅಂತಿಮವಾಗಿ ಡೆಲ್ಲಿ ತಂಡವು 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 163 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಇನ್ನುಳಿದಂತೆ ಡ್ಯಾನಿಯಲ್ ಕ್ರಿಸ್ಟಿಯನ್ 7 ರನ್ ಗಳಿಸಿ ಔಟಾಗದೆ ಉಳಿದರು.

ಸನ್‌ರೈಸರ್ಸ್ ಪರ ನಿಖರ ದಾಳಿ ಸಂಘಟಿಸಿದ ರಾಶೀದ್ ಖಾನ್ ಎರಡು ವಿಕೆಟುಗಳನ್ನು ಕಬಳಿಸಿ ಮಿಂಚಿದರು.

Comments are closed.