ಕ್ರೀಡೆ

ಸಾಮಾಜಿಕ ಜಾಲತಾಣಗಳಲ್ಲಿ ಬಹುಮುಖ್ಯ ವಿಚಾರ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದ ವಿರಾಟ್ ಕೊಹ್ಲಿ ಹೇಳಿದ್ದೇನು..?

Pinterest LinkedIn Tumblr

ನವದೆಹಲಿ: ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಬಹುಮುಖ್ಯ ವಿಚಾರ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದ ಆರ್ ಸಿಬಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

ಹಾಲಿ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ತಂಡದ ಕಳಪೆ ಪ್ರದರ್ಶನಕ್ಕೆ ಸಂಬಂಧಿಸಿದಂತೆ ನಾಯಕ ವಿರಾಟ್ ಕೊಹ್ಲಿ ಮಾತನಾಡುತ್ತಾರೆ.. ತಮ್ಮ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತಾರೆ ಎಂದು ಚರ್ಚೆಯಾಗುತ್ತಿತ್ತು. ಆದರೆ ಇವೆಲ್ಲವನ್ನೂ ಬದಿಗಿರಿಸುವ ವಿರಾಟ್ ಕೊಹ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದು, ಈ ವೇಳೆ ಕೊಹ್ಲಿ ತಮ್ಮ ಖಾಸಗಿ ಜೀವನದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಪಾಪರಾಜಿಗಳು (ರಹಸ್ಯವಾಗಿ ಫೋಟೋಗಳನ್ನು ತೆಗೆಯುವವರು) ಮತ್ತು ಸಾರ್ವಜನಿಕ ಕುತೂಹಲದಿಂದಾಗಿ ತಮ್ಮ ಖಾಸಗಿ ಅಥವಾ ವೈಯುಕ್ತಿಕ ಜೀವನಕ್ಕೆ ತೊಂದರೆಯಾಗುತ್ತಿದೆ. ನಾವು ಸೆಲೆಬ್ರಿಟಿಗಳಾದ ಮಾತ್ರಕ್ಕೆ ನಮಗೆ ಖಾಸಗಿ ಜೀವನ ವಿರುವುದಿಲ್ಲವೇ? ನಾವು ಕೂಡ ಮನುಷ್ಯರೇ.. ನಮಗೂ ಭಾವನೆಗಳಿರುತ್ತವೆ. ಖಾಸಗಿ ಬದುಕಿನ ಕುರಿತು ಸಾರ್ವಜನಿಕ ಚರ್ಚೆಯಾಗುತ್ತಿದ್ದರೆ ಸಾಕಷ್ಟು ಬಾರಿ ನಾನು ಮುಜಗರಕ್ಕೊಳಗಾಗಿದ್ದೆ. ಆದರೆ ಈಗ ಅದನ್ನು ನಿಭಾಯಿಸುವುದನ್ನು ಕಲಿತಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಅಂತೆಯೇ ಖಾಸಗಿ ಜೀವನ ಹಾಗೂ ವೃತ್ತಿ ಜೀವನವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಾನು ಕಲಿತಿದ್ದೇನೆ. ನಾನು ನನ್ನ ಕುಟುಂಬದೊಂದಿಗೆ ಇದ್ದೀಗ ನನ್ನ ಕ್ರಿಕೆಟ್ ವಿಚಾರವನ್ನು ಸಂಪೂರ್ಣವಾಗಿ ಮರೆತು ಕುಟುಂಬದೊಂದಿಗೆ ಬೆರೆಯುತ್ತೇನೆ. ಸ್ನೇಹಿತರನ್ನು ಭೇಟಿ ಮಾಡಿ ಹರಟೆ ಹೊಡೆಯುತ್ತೇನೆ. ಚಿತ್ರಮಂದಿರಗಳಿಗೆ ತೆರಳುತ್ತೇನೆ, ಕಾರಿನಲ್ಲಿ ಲಾಂಗ್ ಡ್ರೈವ್ ಗೆ ಹೋಗುತ್ತೇನೆ ಮತ್ತು ನನ್ನ ಸಾಕು ನಾಯಿಗಳೊಂದಿಗೆ ಕಾಲ ಕಳೆಯುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಕ್ರಿಕೆಟ್ ಗೂ ನನ್ನದೇ ಆದ ಸಮಯವನ್ನು ಮೀಸಲಿರಿಸಿದ್ದು, ಕ್ರಿಕೆಟ್ ಪ್ರವಾಸದಲ್ಲಿದ್ದಾಗ ಮುಂದಿನ ಪಂದ್ಯದಲ್ಲಿ ಹೇಗೆ ಉತ್ತಮ ಪ್ರದರ್ಶನ ನೀಡಬಹುದು. ಯಾವೆಲ್ಲಾ ಅಂಶಗಳನ್ನು ಉತ್ತಮಪಡಿಸಿಕೊಳ್ಳಬಹುದು. ನಿಯಮಿತ ವ್ಯಾಯಾಮ ಮತ್ತು ತರಬೇತಿ ಮೂಲಕ ನನ್ನ ಫಿಟ್ನೆಸ್ ಕಾಯ್ದುಕೊಳ್ಳುತ್ತೇನೆ. ಇನ್ನು ನನ್ನ ಕ್ರಿಕೆಟ್ ಬದುಕು ನಿಜಕ್ಕೂ ನನಗೆ ಹೆಮ್ಮೆ ಎನಿಸುತ್ತದೆ. ದೆಹಲಿಯಲ್ಲಿ ಬೀದಿಯಲ್ಲಿ ಕ್ರಿಕೆಟ್ ಆಡುತ್ತಿದ್ದೆ. ಅಲ್ಲಿಂದ ಇಲ್ಲಿಯವರೆಗೂ ಬಂದಿದ್ದೇನೆ. ನಾನು ತಂಡಕ್ಕಾಗಿ ಆಡಿದ ಮೊದಲ ದಿನದಂದಲೂ ಭಾರತಕ್ಕಾಗಿ ಆಡುತ್ತಿದ್ದೇನೆ ಎಂಬ ಗೌರವ ನನಗೆ ಅತಿಯಾದ ಖುಷಿ ನೀಡುತ್ತಿದೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಜನರು ಇಂಡಿಯಾ ಎಂದು ಕೂಗಿದಾಗ ರೋಮಾಂಚನ ಗೊಳ್ಳುತ್ತಿದ್ದೆ. ಕ್ರೀಸ್ ನಲ್ಲಿದ್ದಾಗ ನನ್ನನ್ನು ಪ್ರೇಕ್ಷಕರು ಹುರಿದುಂಬಿಸುವುದು ನನಗೆ ಅತೀವ ಹೆಮ್ಮೆಯ ವಿಚಾರ ಎಂದು ವಿರಾಟ್ ಹೇಳಿದ್ದಾರೆ.

Comments are closed.