ಕ್ರೀಡೆ

ಪಂಜಾಬ್ ವಿರುದ್ಧ ಗುಡುಗಿದ ಸುನಿಲ್ ನೆರೆಯನ್: ಕೆಕೆಆರ್‌ ‘ಪ್ಲೇ ಆಫ್‌’ ಆಸೆ ಜೀವಂತ

Pinterest LinkedIn Tumblr

ಇಂದೋರ್‌: ಆರಂಭಿಕ ಆಟಗಾರ ಸುನಿಲ್‌ ನಾರಾಯಣ್‌ (75; 36ಎ, 9ಬೌಂ, 4ಸಿ) ಮತ್ತು ನಾಯಕ ದಿನೇಶ್‌ ಕಾರ್ತಿಕ್‌ (50; 23ಎ, 5ಬೌಂ, 3ಸಿ) ಶನಿವಾರ ಹೋಳ್ಕರ್‌ ಕ್ರೀಡಾಂಗಣ ದಲ್ಲಿ ಹರಿಸಿದ ರನ್‌ ಹೊಳೆಯಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಗೆಲುವಿನ ಆಸೆ ಕೊಚ್ಚಿ ಹೋಯಿತು.

ಇವರ ಅರ್ಧಶತಕಗಳ ಬಲದಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ಐಪಿಎಲ್‌ 11ನೇ ಆವೃತ್ತಿಯ ಪಂದ್ಯದಲ್ಲಿ 31ರನ್‌ಗಳಿಂದ ಗೆದ್ದಿತು. ಇದರೊಂದಿಗೆ ‘ಪ್ಲೇ ಆಫ್‌’ ‍ಪ್ರವೇಶಿಸುವ ಕನಸನ್ನು ಜೀವಂತವಾಗಿಟ್ಟುಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಕಾರ್ತಿಕ್‌ ಪಡೆ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 245ರನ್‌ ಬಾರಿಸಿತು. ಐಪಿಎಲ್‌ನಲ್ಲಿ ತಂಡವೊಂದು ದಾಖಲಿಸಿದ ನಾಲ್ಕನೇ ಗರಿಷ್ಠ ಮೊತ್ತ ಇದಾಗಿದೆ.

ಕಠಿಣ ಗುರಿ ಬೆನ್ನಟ್ಟಿದ ಆರ್‌.ಅಶ್ವಿನ್‌ ಸಾರಥ್ಯದ ಕಿಂಗ್ಸ್‌ ಇಲೆವನ್‌ 8 ವಿಕೆಟ್‌ಗೆ 214ರನ್‌ ಗಳಿಸಿ ಹೋರಾಟ ಮುಗಿಸಿತು. ಪಂದ್ಯದಲ್ಲಿ ಒಟ್ಟು 459 ರನ್‌ಗಳು ದಾಖಲಾದವು.

ಅಬ್ಬರದ ಆರಂಭ: ಬ್ಯಾಟಿಂಗ್ ಆರಂಭಿಸಿದ ಕೆಕೆಆರ್‌ ತಂಡಕ್ಕೆ ಕ್ರಿಸ್‌ ಲಿನ್‌ (27; 17ಎ, 2ಬೌಂ, 2ಸಿ) ಮತ್ತು ಸುನಿಲ್‌ ನಾರಾಯಣ್‌ ಅಬ್ಬರದ ಆರಂಭ ನೀಡಿದರು. ಇವರು 32 ಎಸೆತಗಳಲ್ಲಿ 53ರನ್‌ಗಳನ್ನು ಕಲೆಹಾಕಿದರು.

ಆರನೇ ಓವರ್‌ ಬೌಲ್‌ ಮಾಡಿದ ಆ್ಯಂಡ್ರ್ಯೂ ಟೈ, ಎರಡನೇ ಎಸೆತದಲ್ಲಿ ಲಿನ್ ಅವರನ್ನು ಬೌಲ್ಡ್‌ ಮಾಡಿದರು. ನಂತರ ಕರ್ನಾಟಕದ ರಾಬಿನ್‌ ಉತ್ತಪ್ಪ (24; 17ಎ, 2ಬೌಂ, 1ಸಿ) ಮತ್ತು ಆ್ಯಂಡ್ರೆ ರಸೆಲ್‌ (31; 14ಎ, 2ಬೌಂ, 3ಸಿ) ಗರ್ಜಿಸಿದರು.

ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದ ಇವರು 16ನೇ ಓವರ್‌ನಲ್ಲೇ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಆ್ಯಂಡ್ರ್ಯೂ ಟೈ, ಇವರಿಗೆ ಪೆವಿಲಿಯನ್‌ ದಾರಿ ತೋರಿಸಿದರು.

ಬಳಿಕ ನಾಯಕ ಕಾರ್ತಿಕ್‌, ನಿತೀಶ್‌ ರಾಣಾ (11;4ಎ, 1ಬೌಂ, 1ಸಿ) ಮತ್ತು ಶುಭಮನ್‌ ಗಿಲ್‌ (ಔಟಾಗದೆ 16; 8ಎ, 3ಬೌಂ) ಮಿಂಚಿನ ಆಟ ಆಡಿ ತಂಡದ ಮೊತ್ತ ಹೆಚ್ಚಿಸಿದರು.

ಮಿಂಚಿದ ರಾಹುಲ್‌: ಗುರಿ ಬೆನ್ನಟ್ಟಿದ ಕಿಂಗ್ಸ್‌ ಇಲೆವನ್‌ಗೆ ಕರ್ನಾಟಕದ ಕೆ.ಎಲ್‌.ರಾಹುಲ್‌ (66; 29ಎ, 2ಬೌಂ, 7ಸಿ) ಮತ್ತು ಕ್ರಿಸ್‌ ಗೇಲ್‌ (21;17ಎ, 2ಬೌಂ, 1ಸಿ) ಉತ್ತಮ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ಗೆ 57ನ್ ದಾಖಲಿಸಿದರು.

ಆರನೇ ಓವರ್‌ ಬೌಲ್‌ ಮಾಡಿದ ರಸೆಲ್‌, ಸತತ ಎರಡು ಎಸೆತಗಳಲ್ಲಿ ಗೇಲ್‌ ಮತ್ತು ಮಯಂಕ್‌ ಅಗರವಾಲ್‌ ವಿಕೆಟ್‌ ಉರುಳಿಸಿ ಕೆಕೆಆರ್‌ ಜಯದ ಕನಸಿಗೆ ಬಲ ತುಂಬಿದರು. ಕರುಣ್‌ ನಾಯರ್‌ (3) ಕೂಡ ಬೇಗನೆ ಔಟಾದರು.

ಆ್ಯರನ್‌ ಫಿಂಚ್‌ (34; 20ಎ, 3ಸಿ) ಮತ್ತು ನಾಯಕ ಅಶ್ವಿನ್‌ (45; 22ಎ, 4ಬೌಂ, 3ಸಿ) ಛಲದಿಂದ ಹೋರಾಡಿ ಸೋಲಿನ ನಡುವೆಯೂ ಅಭಿಮಾನಿಗಳ ಮನ ಗೆದ್ದರು.

Comments are closed.