ಅಬುಧಾಬಿ: ಇತ್ತೀಚೆಗೆ ದುಬೈನಲ್ಲಿ ನಡೆದ ಏಷ್ಯಾಕಪ್ ಕ್ರೀಡಾ ಕೂಟದ ಲೀಗ್ ಹಂತದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಪಾಕಿಸ್ತಾನದ ಯುವಕ ಆದಿಲ್ ತಾಜ್ ಎಂಬುವವರು ಭಾರತದ ರಾಷ್ಟ್ರಗೀತೆ ಹಾಡಿದ್ದರು. ಆ ವಿಡಿಯೋ ಈಗ ವೈರಲ್ ಆಗಿದ್ದು, ಈ ಬಗ್ಗೆ ಆದಿಲ್ ತಾಜ್ ಮಾತನಾಡಿದ್ದಾರೆ.
ಶಾಂತಿಗಾಗಿ ನನ್ನ ಕಡೆಯಿಂದ ಸಣ್ಣದೊಂದು ಪ್ರಯತ್ನವಿದು ಎಂದು ಯುವಕ ಆದಿಲ್ ತಾಜ್ ಹೇಳಿಕೊಡಿದ್ದಾರೆ.
” ಭಾರತದ ರಾಷ್ಟ್ರಗೀತೆಯನ್ನು ನಾನು ಮೊದಲ ಬಾರಿಗೆ ಕೇಳಿದ್ದು, ಬಾಲಿವುಡ್ ಚಿತ್ರ ‘ಕಬಿ ಖುಷಿ ಕಬಿ ಗಂ’ನಲ್ಲಿ. ಆಗ ನನಗೆ ರೋಮಾಂಚನವಾಗಿತ್ತು ,” ಎಂದೂ ಅವರು ಹೇಳಿದ್ದಾರೆ.
ಉಭಯ ದೇಶಗಳ ನಡುವಿನ ಶಾಂತಿಗಾಗಿ ಇದು ತಮ್ಮ ಸಣ್ಣ ಪ್ರಯತ್ನ ಎಂದು ಹೇಳಿಕೊಂಡಿರುವ ಆದಿಲ್ ತಾಜ್, ಇದಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರೇರಣೆಯೂ ಇದೆ ಎಂದು ಹೇಳಿಕೊಂಡಿದ್ದಾರೆ. ” ಶಾಂತಿ ಸ್ಥಾಪನೆ ವಿಚಾರದಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಬಂದರೆ ನಾವು ಎರಡು ಹೆಜ್ಜೆ ಮುಂದೆ ಹೋಗುತ್ತೇವೆ ಎಂದು ಇಮ್ರಾನ್ ಖಾನ್ ಪ್ರಧಾನಿಯಾಗಿ ಆಯ್ಕೆಯಾದ ದಿನ ಹೇಳಿದ್ದರು. ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದಾಗ ಇಮ್ರಾನ್ ಖಾನ್ ಮಾತು ನನಗೆ ನೆನಪಾಯಿತು. ಶಾಂತಿ ಸ್ಥಾಪನೆಗಾಗಿ ನಾನು ನನ್ನ ಸಣ್ಣದೊಂದು ಪ್ರಯತ್ನ ಮಾಡಿದೆ,” ಎಂದು ಅವರು ಹೇಳಿಕೊಂಡಿದ್ದಾರೆ.
ಕ್ರೀಡಾಂಗಣದಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆ ಮೊಳಗಿದಾಗ ಭಾರತದ ಯುವಕರು ಗೌರವ ಸಮರ್ಪಿಸಿದ್ದನ್ನು ನಾನು ಗಮನಿಸಿದೆ ಎಂದು ಆದಿಲ್ ತಿಳಿಸಿದ್ದಾರೆ.
ಏಷ್ಯಾಕಪ್ 2018ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಬಹುದಾದ ಮುಂದಿನ ಪಂದ್ಯಕ್ಕೆ ಎರಡೂ ದೇಶಗಳ ರಾಷ್ಟ್ರ ಧ್ವಜಗಳನ್ನು ಕೊಂಡೊಯ್ಯುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.
” ಕ್ರೀಡೆ ದೇಶಗಳನ್ನು ಬೆಸೆಯುತ್ತವೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತಷ್ಟು ಸರಣಿಗಳು ನಡೆಯಬೇಕು,” ಎಂದೂ ಅವರು ಹೇಳಿಕೊಂಡಿದ್ದಾರೆ.
ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ, ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದಾಗ ಪಾಕಿಸ್ತಾನದ ಯುವಕ ಆದಿಲ್ ತಾಜ್ ಅವರು ತಾವೂ ಕೂಡ ಅದಕ್ಕೆ ಧನಿಗೂಡಿಸಿದ್ದರು. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಪ್ರಶಂಸೆ ವ್ಯಕ್ತವಾಗಿದೆ.
Comments are closed.