ದುಬೈ: ನಿನ್ನೆ ನಡೆದ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಭಾರತ ವರ್ಸಸ್ ಆಫ್ಘಾನಿಸ್ತಾನ ನಡುವಿನ ಪಂದ್ಯ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಪ್ರಮುಖವಾಗಿ ಈ ಪಂದ್ಯದಲ್ಲಿ ಆಫ್ಘಾನಿಸ್ತಾನ ತನ್ನ ಪ್ರಭಾವಿ ಆಟದ ಮೂಲಕ ಟೈ ಮಾಡಿಕೊಂಡಿತು ಎನ್ನುವುದಕ್ಕಿಂತ ಅಂಪೈರ್ ಗಳ ಕೆಟ್ಟ ತೀರ್ಪಿನಿಂದಾಗಿ ಭಾರತಕ್ಕೆ ಜಯ ಕೈ ತಪ್ಪಿತು ಎನ್ನಬಹುದು. ಹೌದು.. ಇದಕ್ಕೆ ಸಾಕಷ್ಟು ಕಾರಣಗಳಿವೆ. ಪ್ರಮುಖವಾಗಿ ನಿನ್ನೆ ನಡೆದ ಪಂದ್ಯದಲ್ಲಿ ಅಂಪೈರ್ ಗಳ ಸರಣಿ ಕೆಟ್ಟ ತೀರ್ಪುಗಳು ಅಕ್ಷರಶಃ ಭಾರತಕ್ಕೆ ಮುಳುವಾಯಿತು.
ಭಾರತದ ಇನ್ನಿಂಗ್ಸ್ ನ 26ನೇ ಓವರ್ ನಲ್ಲಿ ಧೋನಿ ಜಾವೆದ್ ಅಹ್ಮಾದಿ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು ಔಟ್ ಆದರು. ಆದರೆ ಟಿವಿ ರಿಪ್ಲೆ ನಲ್ಲಿ ಧೋನಿ ಔಟ್ ಆಗಿರಲಿಲ್ಲ. ಅಹ್ಮಾದಿ ಎಸೆದ ಚೆಂಡು ಲೆಗ್ ಸ್ಟಂಪ್ ನಿಂದ ಆಚೆಗೆ ಹೋಗಿತ್ತು, ಈ ವಿಚಾರ ಧೋನಿಗೆ ತಿಳಿದಿತ್ತಾದರೂ, ರಿವ್ಯೂ ಅವಕಾಶ ಇಲ್ಲವಾಗಿದ್ದರಿಂದ ಧೋನಿಗೆ ರಿವ್ಯೂ ಪಡೆಯದೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಅಂತೆಯೇ 44 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕಾರ್ತಿಕ್ ಕೂಡ ನಬಿ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದು ಔಟ್ ಆಗಿದ್ದರು. ಆದರೆ ಇದೂ ಕೂಡ ಔಟ್ ಆಗಿರಲಿಲ್ಲ. ಕಾರ್ತಿಕ್ ಪ್ಯಾಡ್ ಸವರಿದ್ದ ಚೆಂಡು ವಿಕೆಟ್ ನಿಂದ ಮೇಲೆಕ್ಕೆ ಇತ್ತು. ಆದರೂ ಅಂಪೈರ್ ಕಾರ್ತಿಕ್ ಔಟ್ ಎಂದು ತೀರ್ಪು ನೀಡಿದ್ದರಿಂದ ಕಾರ್ತಿಕ್ ಅರ್ಧಶತಕ ವಂಚಿತರಾದರು.
ಸಿಕ್ಸರ್ ಗೆ ಹೋಗಿದ್ದನ್ನು ಬೌಂಡರಿ ಎಂದು ಘೋಷಿಸಿದ ಅಂಪೈರ್
ಇನ್ನು ಅಂತಿಮ ಓವರ್ನ ಎರಡನೇ ಎಸೆತವನ್ನು ಜಡೇಜಾ ಸಿಕ್ಸರ್ಗಟ್ಟಿದ್ದರೂ ಥರ್ಡ್ ಅಂಪೈರ್ ಬೌಂಡರಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದರಿಂದಾಗಿ ಭಾರತಕ್ಕೆ ಗೆಲುವು ನಿರಾಕರಿಸ್ಪಟ್ಟಿತ್ತು. ಜಡೇಜಾ ಹೊಡೆದ ಚೆಂಡು ಬೌಂಡರಿ ಗೆರೆ ಬೀಳುವುದು ರಿಪ್ಲೇನಲ್ಲಿ ಸ್ಪಷ್ಪವಾಗಿತ್ತು. ಆದರೂ ಅಂಪೈರ್ ಟಿವಿ ಅಂಪೈರ್ ಸಲಹೆ ಕೇಳದೇ ನೇರವಾಗಿ ಬೌಂಡರಿ ಎಂದು ಘೋಷಣೆ ಮಾಡಿದ್ದು, ಭಾರತದ ಗೆಲುವಿಗೆ ಮುಳುವಾಯಿತು.
ಒಟ್ಟಿನಲ್ಲಿ ಲೀಗ್ ಹಂತದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಬೃಹತ್ ಗೆಲುವು ದಾಖಲಿಸಿ ಸೂಪರ್ ಫೋರ್ ಹಂತವನ್ನು ಪ್ರವೇಶಿಸಿರುವ ಅಫಘಾನಿಸ್ತಾನ, ಬಳಿಕ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧದ ನಿಕಟ ಪಂದ್ಯಗಳನ್ನು ಕಳೆದುಕೊಳ್ಳುವ ಮೂಲಕ ಟೂರ್ನಿಯಿಂದಲೇ ನಿರ್ಗಮಿಸಿದರೂ ಭಾರತದ ವಿರುದ್ಧ ಕೊನೆಯ ಪಂದ್ಯದಲ್ಲಿ ಟೈ ಸಾಧಿಸುವ ಮೂಲಕ ನೈತಿಕ ಗೆಲುವನ್ನು ದಾಖಲಿಸಿದೆ. ಇನ್ನೊಂದೆಡೆ ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಎಚ್ಚರಿಕೆಯ ಕರೆಗಂಟೆ ಪಡೆದಿದೆ. ಇದೀಗ ಬುಧವಾರ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ವಿಜೇತ ತಂಡವನ್ನು ಭಾರತ ಶುಕ್ರವಾರದಂದು ಫೈನಲ್ನಲ್ಲಿ ಎದುರಿಸಲಿದೆ.
Comments are closed.