ಕ್ರಿಕೆಟ್ ಇತಿಹಾಸದಲ್ಲಿ ಅದೆಷ್ಟೊ ಅಚ್ಚರಿಯ ವಿಷಯಗಳು ನಡೆಯುತ್ತಿರುತ್ತವೆ. ಕೊನೆಯ ಒಂದು ಎಸೆತದಲ್ಲಿ ಗೆಲ್ಲಲು 6 ರನ್ ಬೇಕಿದ್ದಾದ ಬ್ಯಾಟ್ಸ್ಮನ್ ಅದ್ಭುತ ಸಿಕ್ಸ್ ಸಿಡಿಸಿ ಗೆಲುವು ಸಾಧಿಸಿರುವ ಘಟನೆಗಳು ನಡೆದಿವೆ. ಆದರೆ, ಇಲ್ಲಿ ಅಚ್ಚರಿ ಎಂಬಂತೆ ಕೊನೆಯ ಎಸೆತದಲ್ಲಿ ಗೆಲ್ಲಲು 6 ರನ್ ಬೇಕಿದ್ದಾಗ ಎಸೆತ ಪೂರ್ಣಗೊಳ್ಳದೆ ಪಂದ್ಯ ಗೆದ್ದ ಅಪರೂಪದ ಘಟನೆ ನಡೆದಿದೆ.
6 runs needed off 1 ball and the team scored it with 1 ball to spare 😂 pic.twitter.com/XOehccVBzA
— Amit A (@Amit_smiling) January 8, 2019
ಮಹಾರಾಷ್ಟ್ರದಲ್ಲಿ ನಡೆದ ಆದರ್ಶ್ ಕ್ರಿಕೆಟ್ ಕ್ಷಬ್ ಪಂದ್ಯಾವಳಿಯಲ್ಲಿ ಈ ರೋಚಕ ಘಟನೆ ನಡೆದಿದೆ. 5 ಓವರ್ಗಳ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಆಂಧ್ರ ಪ್ರದೇಶದ ಜುನಿ ದೊಂಬಿ ತಂಡ 75 ರನ್ ಕಲೆಹಾಕಿತ್ತು. 76 ರನ್ಗಳ ಗುರಿ ಬೆನ್ನತ್ತಿದ ಮಹಾರಾಷ್ಟ್ರ ತಂಡ 4.5 ಓವರ್ನಲ್ಲಿ 70 ರನ್ ಬಾರಿಸಿತು. ಈ ಮೂಲಕ ಕೊನೆಯ ಎಸೆತದಲ್ಲಿ ಗೆಲ್ಲಲು 6 ರನ್ಗಳ ಅವಶ್ಯಕತೆಯಿತ್ತು. ಬ್ಯಾಟ್ಸ್ಮನ್ ಸಿಕ್ಸ್ ಸಿಡಿಸಿದರೆ ಮಾತ್ರ ಗೆಲುವು ಮಹಾರಷ್ಟ್ರದ ಪಾಲಾಗುತ್ತದೆ.
ಆದರೆ, ಬ್ಯಾಟ್ಸ್ಮನ್ ಬಾಲ್ ಟಚ್ ಮಾಡಲೇ ಇಲ್ಲ. ಆದರೂ, ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟ. ಅದು ಕೂಡ ಇದ್ದ ಒಂದು ಬಾಲ್ ಉಳಿಸಿ. ಕೊನೆಯ ಒಂದು ಬಾಲ್ ಎಸೆಯಬೇಕಿದ್ದ ಬೌಲರ್ ಸತತ ಆರು ವೈಡ್ ಬಾಲ್ ಎಸೆದು ಎದುರಾಳಿ ತಂಡಕ್ಕೆ ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ. ಕೊನೆಯ ಓವರ್ನ ಐದು ಎಸೆತಗಳನ್ನು ಸರಿಯಾಗೆ ಎಸೆದ ಬೌಲರ್ ಕೊನೆಯ ಎಸೆತವನ್ನು ಎಸೆಯಲು ಪರದಾಡಿ ತಮ್ಮ ತಂಡದ ಸೋಲಿಗೆ ಕಾರಣನಾದ.
ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾಕಷ್ಟು ಕಮೆಂಟ್ಗಳು ಬರಲಾರಂಭಿಸಿವೆ. ಕೆಲವರು ಇದೊಂದು ಮ್ಯಾಚ್ ಫಿಕ್ಸಿಂಗ್ ಪಂದ್ಯವೆಂದರೆ ಇನ್ನೂ ಕೆಲವರು ಒಂದೂ ಬಾಲ್ ಟಚ್ ಮಾಡದ ಬ್ಯಾಟ್ಸ್ಮನ್ ಅನ್ನು ಹಾಡಿಹೊಗಳಿದ್ದಾರೆ.
Comments are closed.