ಕ್ರೀಡೆ

‘ವಿಶ್ವಕಪ್’ನಲ್ಲಿ ಪಾಕ್ ವಿರುದ್ಧದ ಪಂದ್ಯ ಬಹಿಷ್ಕರಿಸಿದರೆ ಭಾರತ ತಂಡವನ್ನೇ ಐಸಿಸಿ ನಿಷೇಧಿಸುವ ಸಾಧ್ಯತೆ !

Pinterest LinkedIn Tumblr

ಮುಂಬೈ: ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಆಡುವುದನ್ನು ಬಿಸಿಸಿಐ ಬಹಿಷ್ಕರಿಸಿದರೆ, ಭಾರತ ತಂಡವನ್ನೇ ಐಸಿಸಿ ನಿಷೇಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೌದು.. ಪುಲ್ವಾಮ ಉಗ್ರ ದಾಳಿ ಬಳಿಕ ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು ಎಂಬ ವಾದ ಗಟ್ಟಿಯಾಗಿ ಕೇಳಿಬರುತ್ತಿದ್ದು, ಇದರ ಬೆನ್ನಲ್ಲೇ ಈ ವಿಚಾರದ ಸಾಧಕ-ಬಾಧಕಗಳ ಕುರಿತೂ ಭಾರಿ ಚರ್ಚೆಗಳು ನಡೆಯುತ್ತಿವೆ.

ನಿನ್ನೆಯಷ್ಟೇ ಒಂದೇ ವೇಳೆ ಭಾರತ ತಂಡ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಆಡಲು ಒಪ್ಪದಿದ್ದರೆ ಆಗ ಆ ಪಂದ್ಯಗಳಲ್ಲಿ ಪಾಕಿಸ್ತಾನವೇ ಜಯ ಗಳಿಸಿದೆ ಎಂದು ಅಂಕ ನೀಡುವ ಸಾಧ್ಯತೆಗಳ ಕುರಿತು ಚರ್ಚೆಯಾಗಿತ್ತು. ಆದರೆ ಇದೀಗ ಅದಕ್ಕಿಂತಲೂ ಮಿಗಿಲಾಗಿ ಐಸಿಸಿ ಇನ್ನೂ ಒಂದು ಹೆಜ್ಜೆ ಮುಂದೆ ಕ್ರಿಕೆಟ್ ನಿಂದಲೇ ಭಾರತ ತಂಡದ ಮೇಲೆ ನಿಷೇಧ ಹೇರುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ.

ಐಸಿಸಿ ನಿಯಮಗಳ ಅನ್ವಯ ತನ್ನ ಸದಸ್ಯ ರಾಷ್ಟ್ರ ನಿಗದಿತ ಟೂರ್ನಿಯಲ್ಲಿ ಯಾವುದೇ ಕಾರಣಕ್ಕೂ ಪಾಲ್ಗೊಳ್ಳದೇ ಹೋದರೆ ಅಂತಹ ಸದಸ್ಯ ರಾಷ್ಟ್ರದ ಮೇಲೆ ಐಸಿಸಿ ಶಿಸ್ತು ಕ್ರಮ ಜರುಗಿಸುವ ಹಕ್ಕನ್ನು ಹೊಂದಿದೆ. ಅಂತೆಯೇ ಐಸಿಸಿ ಆಯೋಜಿಸಿರುವ ಮತ್ತು ಈಗಾಗಲೇ ವೇಳಾಪಟ್ಟಿ ಕೂಡ ನಿಗದಿಯಾಗಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಯಾವುದೇ ಪಂದ್ಯವನ್ನೂ ಬಹಿಷ್ಕರಿಸಿದರೂ ಆಗ ಐಸಿಸಿ ಭಾರತದ ವಿರುದ್ಧ ಶಿಸ್ತುಕ್ರಮ ಜರುಗಿಸಬಹುದು. ಆಗ ಟೀಂ ಇಂಡಿಯಾ ಮೇಲೆ ಐಸಿಸಿ ಭಾರಿ ಮೊತ್ತದ ದಂಡ ಅಥವಾ ನಿಷೇಧ ಹೇರುವ ಸಾಧ್ಯತೆ ಕೂಡ ಇದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.

Comments are closed.