ನವದೆಹಲಿ: ‘ಮನ್ ಕಡ್’ ಮೂಲಕ ಜಾಸ್ ಬಟ್ಲರ್ ರನ್ನು ರನೌಟ್ ಮಾಡಿದ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ನಡೆಗೆ ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿರುವಂತೆಯೇ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಮನ್ ಕಡ್ ಗೆ ವಿರುದ್ಧವಾಗಿ ಹೇಳಿಕೆ ನೀಡುವ ಮೂಲಕ ಅಶ್ವಿನ್ ಗೆ ಶಾಕ್ ನೀಡಿದ್ದಾರೆ.
ನಿನ್ನೆ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ಹಾಗು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಮೊದಲ ಪಂದ್ಯದಲ್ಲಿ, ಜೋಸ್ ಬಟ್ಲರ್ ಔಟಾದ ರೀತಿ ಈಗ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ವೇಳೆ ಆರಂಭಿಕ ಆಟಗಾರ ಜಾಸ್ ಬಟ್ಲರ್ 69 ರನ್ ಗಳಿಸಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ನಾನ್ ಸ್ಟ್ರೈಕರ್ ನಲ್ಲಿದ್ದ ಬಟ್ಲರ್, ಅಶ್ವಿನ್ ಬೌಲ್ ಹಾಕುವ ಮೊದಲೇ ಕ್ರೀಸ್ ಬಿಟ್ಟಿದ್ದರು. ಇದನ್ನ ನೋಡಿದ ಅಶ್ವಿನ್ ಬಾಲ್ ಎಸೆಯದೇ ವಿಕೆಟ್ ಎಗರಿಸಿ ‘ಮನ್ ಕಡ್ ರನೌಟ್’ಗಾಗಿ ಅಂಪೈರ್ ಗೆ ಮನವಿ ಮಾಡಿದರು. ಆದರೆ ಆನ್ ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್ ಗೆ ಮೊರೆ ಹೋದರು. ಥರ್ಡ್ ಅಂಪೈರ್ ಬಟ್ಲರ್ ಔಟೆಂದು ತೀರ್ಪು ನೀಡಿದರು. ಇದರಿಂದ ಶಾಕ್ ಗೆ ಒಗೊಳಗಾದ ಬಟ್ಲರ್ ಅಶ್ವಿನ್ ಜೊತೆ ವಾಗ್ವಾದಕ್ಕಿಳಿದರು. ಕೊನೆಗೆ ಬೇರೆ ದಾರಿ ಇಲ್ಲದೆ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದರು.
ಇದೀಗ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿರುವ ಬೆನ್ವಲ್ಲೇ ಈ ಬಗ್ಗೆ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಐಪಿಎಲ್ ಟೂರ್ನಿಯ ಆರಂಭಕ್ಕೂ ಮೊದಲೇ ಎಲ್ಲ ತಂಡಗಳ ನಾಯಕರೊಂದಿಗಿನ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿತ್ತು. ಅದರಂತೆ ಸೌಜನ್ಯದ ಆಧಾರದ ಮೇಲೆ ‘ಮನ್ ಕಡ್’ (ನಾನ್ ಸ್ಟ್ರೈಕರ್ ನಲ್ಲಿರುವ ಬ್ಯಾಟ್ಸಮನ್ ಬೌಲರ್ ಬಾಲ್ ಎಸೆಯುವ ಮೊದಲೇ ಕ್ರೀಸ್ ಬಿಟ್ಟರೆ ರನೌಟ್ ಮಾಡುವುದು)ಗೆ ಮಾನ್ಯತೆ ಇಲ್ಲ ಎಂದು ನಿರ್ಧರಿಸಲಾಗಿತ್ತು ಎಂದು ಹೇಳಿದ್ದಾರೆ.
ಅಂತೆಯೇ ಅಂದಿನ ಸಭೆಯಲ್ಲಿ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಕೂಡ ಇದ್ದರು ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ. ಆದರೆ ಶುಕ್ಲಾ ಅವರ ಹೇಳಿಕೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಒಂದು ವೇಳೆ ಮನ್ ಕಡ್ ಗೆ ಮಾನ್ಯತೆ ಇಲ್ಲ ಎಂದಾದರೇ ನಿನ್ನೆಯ ಪಂದ್ಯದಲ್ಲಿ ಮೂರನೇ ಅಂಪೈರ್ ಬಟ್ಲರ್ ರನ್ನು ಔಟ್ ಎಂದು ಘೋಷಣೆ ಮಾಡಿದ್ದೇಕೆ..? ಐಪಿಎಲ್ ಟೂರ್ನಿಗೂ ಮೊದಲು ಕೈಗೊಂಡ ನಿರ್ಣಯಗಳನ್ನು ರೂಲ್ ಬುಕ್ ನಲ್ಲಿ ಅಳವಡಿಸಿರಲಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಇಷ್ಟಕ್ಕೂ ಐಸಿಸಿಯ ನೂತನ ಕ್ರಿಕೆಟ್ ನಿಯಮ ಏನು ಹೇಳುತ್ತದೆ?
ಕ್ರಿಕೆಟ್ ರೂಲ್ಸ್ 41.16ರ ಪ್ರಕಾರ ನಾನ್ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ ಬೌಲರ್ ಬಾಲ್ ಬಿಡುವುದಕ್ಕಿಂತ ಮುಂಚೆ ಕ್ರೀಸ್ ಬಿಟ್ಟು ಕದಲಬಾರದು. ಒಂದು ವೇಳೆ ಹಾಗೇನಾದ್ರು ಮಾಡಿದ್ರೆ ಬೌಲರ್ಗೆ ರನೌಟ್ ಮಾಡುವ ಅವಕಾಶವಿದೆ.
Comments are closed.