ಕ್ರೀಡೆ

ವಿಶ್ವಕಪ್’ನಿಂದ ಔಟ್ ಆದ ಬೆನ್ನಲ್ಲೇ ಕಾರ್ತಿಕ್, ಜಾದವ್ ಕೂಡ ತಂಡದಿಂದ ಔಟ್ !

Pinterest LinkedIn Tumblr

ನವದೆಹಲಿ: ಹಾಲಿ ವಿಶ್ವಕಪ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಭಾರತ ತಂಡದ ಹಲವು ಆಟಗಾರರ ಕ್ರಿಕೆಟ್ ಬದುಕು ಇದೀಗ ಅತಂತ್ರ ಸ್ಥಿತಿಯಲ್ಲಿದೆ. ಪ್ರಮುಖವಾಗಿ ಕೇದಾರ್ ಜಾದವ್ ಮತ್ತು ದಿನೇಶ್ ಕಾರ್ತಿಕ್ ರಂತಹ ಆಟಗಾರರಿಗೆ ತಂಡದ ಬಾಗಿಲು ಮುಚ್ಚಿದಂತೆಯೇ ಎಂದು ಹೇಳಲಾಗುತ್ತಿದೆ.

ಇದಕ್ಕೆ ಪ್ರಮುಖ ಕಾರಣ ಟಿ20 ವಿಶ್ವಕಪ್.. ಮುಂಬರುವ ಟಿ20 ವಿಶ್ವಕಪ್ ಗಾಗಿ ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಈಗಿನಿಂದಲೇ ತಂಡವನ್ನು ಸಿದ್ಧ ಪಡಿಸಬೇಕಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಇನ್ನು ಕೇವಲ 18 ತಿಂಗಳು ಮಾತ್ರ ಬಾಕಿ ಇದ್ದು, ಇದೇ ಕಾರಣಕ್ಕೆ ಆಯ್ಕೆ ಸಮಿತಿ ಹೊಡಿ-ಬಡಿ ಆಟಕ್ಕೆ ಹೆಚ್ಚು ಯುವ ಆಟಗಾರರತ್ತ ಗಮನ ಹರಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಕೇದಾರ್ ಜಾದವ್ ಮತ್ತು ದಿನೇಶ್ ಕಾರ್ತಿಕ್ ರಂತಹ ಆಟಗಾರರಿಗೆ ತಂಡದಿಂದ ಕೊಕ್ ಕೊಡುವ ಕುರಿತು ಸಮಿತಿ ಗಂಭೀರ ಚಿಂತನೆಯಲ್ಲಿದೆ ಎನ್ನಲಾಗಿದೆ.

ಶ್ರೀಲಂಕಾದಲ್ಲಿ ನಡೆದ ನಿಡಹಾಸ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಅವರ ಸಾಹಸದಿಂದಾಗಿಯೇ ಭಾರತ ಟ್ರೋಫಿ ಎತ್ತಿ ಹಿಡಿದಿತ್ತು. ಆದರೆ ಆ ಪಂದ್ಯದ ಬಳಿಕ ಕಾರ್ತಿಕ್ ಬ್ಯಾಟ್ ನಿಂದ ಅಂತಹ ಮತ್ತೊಂದು ಪ್ರದರ್ಶನ ಮೂಡಿ ಬಂದಿಲ್ಲ. ಹಾಲಿ ವಿಶ್ವಕಪ್ ಟೂರ್ನಿಯಲ್ಲೂ ಕಾರ್ತಿಕ್ ರಿಂದಾಗಲಿ ಅಥವಾ ಕೇದಾರ್ ಜಾದವ್ ಅವರ ಬ್ಯಾಟ್ ನಿಂದ ಹೆಚ್ಚು ರನ್ ಹರಿದಿಲ್ಲ ಎಂಬುದು ಗಮನಾರ್ಹ.

ಈಗಾಗಲೇ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ನೂರಾರು ಉದಯೋನ್ಮುಖ ಆಟಗಾರರು ಸರತಿ ಸಾಲಲ್ಲಿ ನಿಂತಿದ್ದು, ಪ್ರಮುಖವಾಗಿ ಅಂಡರ್ 19 ವಿಶ್ವಕಪ್ ಟೂರ್ನಿಯ ಸೆನ್ಸೇಷನ್ ಗಳಾದ, ಶುಭ್ ಮನ್ ಗಿಲ್, ಪೃಥ್ವಿ ಶಾ ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿಯೇ ಪೃಥ್ವಿಶಾ ತಮ್ಮ ಖದರ್ ತೋರಿಸಿದ್ದರು. ಆದರೆ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡು ಪ್ರವಾಸಕ್ಕೆ ಅಲಭ್ಯರಾದರು. ಬಳಿಕ ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಶುಭ್ ಮನ್ ಗಿಲ್ ಆಡಿದ ಒಂದೇ ಪಂದ್ಯದಲ್ಲಿ ಗಮನ ಸೆಳೆದಿದ್ದರು.

ಇದೇ ರೀತಿಯ ಪ್ರಯೋಗವನ್ನು ಕೋಚ್ ರವಿಶಾಸ್ತ್ರಿ 2 ವರ್ಷಗಳ ಹಿಂದೆ ಮಾಡಿದ್ದರು. ಅವರ ಆ ಪ್ರಯೋಗದ ಫಲವಾಗಿಯೇ ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಹಲ್ ರಂತಹ ಸ್ಪಿನ್ ಸೆನ್ಸೇಷನ್ ಗಳು ತಂಡದಲ್ಲಿ ಕಾಣಿಸಿಕೊಂಡರು. ಅಷ್ಟು ಹೊತ್ತಿಗಾಗಲೇ ತಂಡದಲ್ಲಿ ಭದ್ರವಾಗಿ ನೆಲೆ ನಿಂತಿದ್ದ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಕೂಡ ಚುಟುಕು ಕ್ರಿಕೆಟ್ ನಲ್ಲಿ ಸೈಡ್ ಲೈನ್ ಆಗಿದ್ದರು.

ಇನ್ನು ಕರ್ನಾಟಕದ ಮನೀಷ್ ಪಾಂಡೇ, ಶ್ರೇಯಸ್ ಅಯ್ಯರ್ ಕೂಡ ಕಳೆದ ಐಪಿಎಲ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಚುಟುಕು ಕ್ರಿಕೆಟ್ ನಲ್ಲಿ ಮಧ್ಯಮ ಕ್ರಮಾಂಕಕ್ಕೆ ಇವರು ಫಿಟ್ ಎಂಬ ಭಾವನೆ ಮೂಡಿಸಿದ್ದಾರೆ. ಇವರಷ್ಟೇ ಅಲ್ಲದೇ ಮಯಾಂಕ್ ಅಗರ್ವಾಲ್, ಯುವ ವೇಗಿಗಳಾದ ನವದೀಪ್ ಸೈನಿ, ಖಲೀಲ್ ಅಹ್ಮದ್ ಮತ್ತು ದೀಪಕ್ ಚಹರ್, ಲೆಗ್ ಸ್ಪಿನ್ನರ್‌ಗಳಾದ ರಾಹುಲ್ ಚಹರ್ ಮತ್ತು ಮಾಯಾಂಕ್ ಮಾರ್ಕಂಡೆ, ಆಲ್‌ರೌಂಡರ್ ಕ್ರುಣಾಲ್ ಪಾಂಡ್ಯ, ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಆಯ್ಕೆದಾರರ ಗಮನ ಸೆಳೆದಿದ್ದಾರೆ.

ಪ್ರಮುಖವಾಗಿ ಸಂಜು ಸ್ಯಾಮ್ಸನ್ ಕುರಿತಂತೆ ಇಂಡಿಯಾ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಸಕಾರಾತ್ಮಕವಾಗಿದ್ದು, ಅಧುನಿಕ ಕ್ರಿಕೆಟ್ ನ ಅದ್ಭುತ ಆಟಗಾರ ಎಂದು ಬಣ್ಣಿಸಿದ್ದಾರೆ. ಹೀಗಾಗಿ ರಿಷಬ್ ಪಂತ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಪ್ರಮುಖ ಎದುರಾಳಿ ಎನ್ನಬಹುದು.

Comments are closed.